ಮಂಡ್ಯ: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಡ್ಯ ಹಾಗೂ ಮಂಡ್ಯ ನಾಗರೀಕರ ವೇದಿಕೆ ಇವರ ಸಹಯೋಗದಲ್ಲಿ ಯೋಧ ನಮನ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಶುಕ್ರವಾರ ಮಂಡ್ಯದ ಸರ್ಕಾರಿ ಮೈದಾನ ದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ ಎಸ್ ಪುಟ್ಟರಾಜು, ಈ ನಾಡಿನ ಮೂಲೆ ಮೂಲೆಗಳಲ್ಲಿ ತಮ್ಮ ವಿದ್ಯಾರ್ಥಿಗಳ ತಂಡದೊಂದಿಗೆ ಮೌಲ್ಯಯುತವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾರ್ಯ ನಿಜವಾಗಿಯೂ ಶ್ಲಾಘನೀಯ. ಅದರೊಂದಿಗೆ ದೇಶಕ್ಕಾಗಿ ಪ್ರಾಣತೆತ್ತ ಮಂಡ್ಯದ ಗುರುವಿನ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿಯ ಧನಸಹಾಯ ಮಾಡಿ, ಈ ನುಡಿನಮನ ಕಾರ್ಯಕ್ರಮವನ್ನು ನೀಡುತ್ತಿರುವ ಡಾ ಮೋಹನ್ ಆಳ್ವ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಧ್ಯಕ್ಷ ಡಾ ಮೋಹನ್ ಆಳ್ವ, ಜಗತ್ತಿನಲ್ಲೇ ಪುಣ್ಯ ಭೂಮಿ ಎಂದು ಕರೆಸಿಕೊಳ್ಳುವ ನಮ್ಮ ಈ ದೇಶಕ್ಕೆ 70,000 ವರ್ಷಗಳ ಅದ್ಭುತವಾದ ಇತಿಹಾಸ ಮತ್ತು ಪರಂಪರೆ ಇದೆ. ಈ ದೇಶಕ್ಕೆ ಈ ಹಿಂದೆ ವಲಸೆ ಬಂದವರು ಅನೇಕರು, ಹಾಗೂ ದಾಳಿ ಮಾಡಿದವರೂ ಅನೇಕರು. ಆದರೆ ಆಧುನಿಕ ಕಾಲದಲ್ಲಿ ನಡೆವ ಹೀನ ಭಯೋತ್ಪದಕ ದಾಳಿಗಳು ತೀವ್ರ ಖಂಡನೀಯ. ಬುದ್ಧ, ಮಹಾವೀರ, ಗಾಂದಿ, ರಾಮಕೃಷ್ಣ ಪರಮಹಂಸ, ವಿವೇಕಾನಂದರ ಈ ನಾಡು ನಮಗೆ ಉಪನಿಷತ್ ಕಾಲದಿಂದಲೂ ಶಾಂತಿಯುತ ಮತ್ತು ಪ್ರೀತಿಯುತ ಬದುಕಿನ ಪಾಠವನ್ನು ಕಲಿಸಿದೆ.
ನಾವೆಲ್ಲರೂ ನಮ್ಮ ನಮ್ಮ ಕೆಲಸಗಳನ್ನು ನಿಶ್ಚಿಂತೆಯಿಂದ ನಮ್ಮ ದೇಶದಲ್ಲಿ ಮಾಡಲು ಸಾಧ್ಯ ಆಗಿರೋದು ನಮ್ಮನ್ನು ರಕ್ಷಣೆ ಮಾಡುವ ಸೈನಿಕರಿಂದ. ನಮ್ಮ ಸುಖ ನಮ್ಮ ಯೋಧರ ಬೆವರಿನಲ್ಲಿ ಹಾಗೂ ನಮ್ಮ ಧೀರ ಸೈನಿಕರ ರಕ್ತದಲ್ಲಿ ಬರೆದಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರಿಗೇನಾದರೂ ಸಮಸ್ಯೆಯಾದರೆ ಇಡೀ ದೇಶ ಯೋಧರ ಕುಟುಂಬದ ಜೊತೆಗಿರುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ ಮೋಹನ್ ಆಳ್ವ & ಮಂಡ್ಯದ ಶಾಸಕ ಎಂ ಶ್ರೀನಿವಾಸ ಪುಲ್ವಾಮ ಘಟನೆಯಲ್ಲಿ ವೀರ ಮರಣ ಹೊಂದಿದ ಮಂಡ್ಯದ ಗುರು ಹೆಚ್ ಯೋಧನ ಮಡದಿ ಕಲಾವತಿಗೆ ಹತ್ತು ಲಕ್ಷ ರೂಪಾಯಿಯ ಧನಸಹಾಯವನ್ನು ಚೆಕ್‍ರೂಪದಲ್ಲಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕದ ಖ್ಯಾತ ಕಲಾವಿದ ರಮೇಶ್ಚಂದ್ರ ತಂಡದಿಂದ ದೇಶ ಭಕಿ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಭಾವಂತ 325 ವಿದ್ಯಾರ್ಥಿಗಳಿಂದ 3.30 ಘಂಟೆಯ ದೇಶ ವಿದೇಶಗಳ ಪ್ರಕಾರದ ಶಾಸ್ತ್ರೀಯ, ಜನಪದ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇರಳದ ಮೋಹಿನಿಯಾಟ್ಟಂ- ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ- ದಾಸ ದೀಪಾಂಜಲಿ, ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶಾಸ್ತ್ರೀಯ ನೃತ್ಯ ಭೋ ಶಾಂಬೋ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್‍ಚಲಮ್, ಕಥಕ್ ನೃತ್ಯ- ನವರಂಗ್, ಪಂಜಾಬ್‍ನ ಬಾಂಗ್ಡ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ಇಂಡಿಯಾ ಗಾಟ್ ಖ್ಯಾತಿಯ ಪ್ರಹ್ಲಾದ್ ಆಚಾರ್ಯರ ಶ್ಯಾಡೋ ಪ್ಲೇ, ತೆಂಕುತಿಟ್ಟು ಯಕ್ಷಗಾನ – ಅಗ್ರಪೂಜೆ ಪ್ರದರ್ಶನಗೊಂಡವು.
ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ ಮಂಜುನಾಥ ಅಡೇಮನೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯದ ಶಾಸಕ ಎಂ ಶ್ರೀನಿವಾಸ, ಮಾಜಿ ಶಾಸಕ ಹಾಗೂ ಜನತಾ ಶಿಕ್ಷಣ ಟ್ರಸ್ಟನ ಅಧ್ಯಕ್ಷ ಡಾ ಎಚ್ ಡಿ ಚೌಡಯ್ಯ, ಮಂಡ್ಯ ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ಜಯಪ್ರಕಾಶ ಗೌಡ, ಉದ್ಯಮಿ ಜಗನ್ನಾಥ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹೆಚ್ ವಿ ಜಯರಾಮ್ ಹಾಗೂ ಇತರರು ಉಪಸ್ಥಿತರಿದ್ದರು.