ಮೂಡುಬಿದಿರೆ: ಮಕ್ಕಳ ಜೀವನ ಯಾಂತ್ರೀಕೃತವಾಗಬಾರದು. ಬದುಕು ಎಂದರೆ ಅವರಿಗೆ ಕೇವಲ ಕಾಂಕ್ರೀಟು ಕಾಡು ಆಗಬಾರದು. ಅದರ ಬದಲು ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಮಕ್ಕಳಿಗೆ ಜಲ, ಪರಿಸರದ ಬಗ್ಗೆ ಶಿಕ್ಷಣದಲ್ಲಿ ಮಾತ್ರವಲ್ಲ, ಮನೆಯಲ್ಲಿ ಕೂಡ ಪೋಷಕರು ತಿಳಿ ಹೇಳಬೇಕು. ಬೇಸಿಗೆ ಶಿಬಿರಗಳಿಂದ ಪ್ರಕೃತಿ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕೆಂದು ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಹತ್ತು ದಿನಗಳು ನಡೆಯುವ ಚಿಣ್ಣರಮೇಳ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಕುದ್ರೋಳಿ ಗಣೇಶ್ ಮಾತನಾಡಿ, ಕೇವಲ ಶಿಕ್ಷಣದಿಂದ ಜೀವನೋಲ್ಲಾಸ ಲಭಿಸದು. ಅದರ ಒಟ್ಟಿಗೆ ಕಲೆ, ಸಂಸ್ಕೃತಿ, ಕ್ರೀಡೆಯಂತಹ ಕ್ರೀಯಾಶೀಲತೆಯನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ, ಕ್ರೀಯಾಶೀಲತೆಯ ಗುಣವನ್ನು ಹೊರಹೊಮ್ಮಿಸಿ, ವ್ಯಕ್ತಿತ್ವವನ್ನು ಬೆಳಗಿಸುವ ಕೆಲಸವನ್ನು ಬೇಸಿಗೆ ಶಿಬಿರಗಳ ಮೂಲಕ ಮಾಡಬಹುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ, ಪರಿಣಿತ ತಂಡದಿಂದ ನಡೆಯುವ ಆಳ್ವಾಸ್ ಚಿಣ್ಣರಮೇಳ ಇತರ ಚಿಣ್ಣರ ಮೇಳಕ್ಕಿಂತ ಭಿನ್ನವಾಗಿ ಆಯೋಜಿಸಲಾಗಿದೆ. ಪರಿಣಿತ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳಿಂದ ಕಲಾತ್ಮಕವಾಗಿ ಶಿಬಿರ ಮೂಡಿಬರಲಿದೆ. ಬೇಸಿಗೆ ಶಿಬಿರಗಳನ್ನು ಚಿಣ್ಣರು ಸದುಪಯೋಗ ಮಾಡಿಕೊಂಡರೇ ಶಿಬಿರಗಳ ಮೂಲಕವು ಮನಸ್ಸು ಕಟ್ಟಲು ಸಾಧ್ಯ. ಶಿಕ್ಷಣ, ಆರೋಗ್ಯ ಹಾಗೂ ಸಧ್ಯ ಬೇಸಿಗೆ ಶಿಬಿರಗಳು ಕೂಡ ವ್ಯಾಪಾರಿಕರಣವಾಗುತ್ತಿರುವ ಇಂದಿನ ಕಾಲದಲ್ಲಿ, ಇದರಿಂದ ಹೊರತಾಗಿ ಕಲೆ, ಕ್ರೀಡೆ, ಸಂಸ್ಕೃತಿ, ಗುಣಮಟ್ಟದ ಶಿಕ್ಷಣ ನೀಡುವಂತಹ ಕೆಲಸ ನಾವು ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಬುದ್ಧಿಮತ್ತೆ ಅವರ ಪ್ರರತಿಭೆಗಳಿಗೆ ಆಳ್ವಾಸ್ ಅವಕಾಶ ಮಾಡಿಕೊಡುತ್ತಿದ್ದು, ಬೇಸಿಗೆ ಶಿಬಿರ ಕೂಡ ಈ ನಿಟ್ಟಿನಲ್ಲಿ ನಡೆಯಲಿದೆ ಎಂದರು.
ಚರ್ಮವಾದ್ಯ ನುಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಶಿಬಿರ ಮುಖ್ಯ ಸಂಚಾಲಕ ಜೀವನ್‍ರಾಮ್ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಭಾಸ್ಕರ್ ನೆಲ್ಯಾಡಿ ವಂದಿಸಿದರು.