ಮೂಡುಬಿದಿರೆ: ಕಳೆದ 15 ವರ್ಷಗಳಿಂದ ಹೋಮಿಯೋಪಥಿ ವೈದ್ಯ ಕ್ಷೇತ್ರದಲ್ಲಿ ಗುಣಮಟ್ಟದ ತರಬೇತಿ ಮತ್ತು ಚಿಕಿತ್ಸೆಯನ್ನು ನೀಡುತ್ತಿರುವ ಆಳ್ವಾಸ್ ಹೋಮಿಯೋಪಥಿ ಕಾಲೇಜು ಮತ್ತು ಭಾರತೀಯ ಹೋಮಿಯೋಪಥಿ ವೈದ್ಯ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಮೇ.19ರಂದು ರಾಷ್ಟ್ರೀಯ ಸಮಾವೇಶವು ನಡೆಯಲಿದೆ ಎಂದು ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‍ರಾಜ್ ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೋಮಿಯೋಪಥಿಯ ಶ್ರೇಷ್ಠತೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ, ಹೋಮಿಯೋಪಥಿ ವೈದ್ಯ ವಿಜ್ಞಾನದ ಹೊಸ ಮಜಲುಗಳನ್ನು ಅನ್ವೇಷಿಸುವ ನಿರಂತರ ಪ್ರಯತ್ನಗಳು ಆಳ್ವಾಸ್‍ನಲ್ಲಿ ನಡೆಯುತ್ತಿದೆ. ಇದೀಗ ದೀರ್ಘಕಾಲೀನ ರೋಗಗಳಲ್ಲಿ ಹೋಮಿಯೋಪಥಿ ಚಿಕಿತ್ಸೆಯ ವಿವಿಧ ಆಯಾಮಗಳನ್ನು, ಪರಿಣಾಮಕಾರಿ ಚಿಕಿತ್ಸಾ ರೀತಿಯನ್ನು ಚರ್ಚಿಸುವುದು ಇದರ ಈ ಸಮಾವೇಶದ ಉದ್ದೇಶವಾಗಿದೆ.
ಸಮಾವೇಶದಲ್ಲಿ ಮುಂಬೈಯ ಅಂತರಾಷ್ಟ್ರೀಯ ಖ್ಯಾತಿಯ ಡಾ.ಅನಿತಾ ಸಾಲುಂಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದು, ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ 8ನೇಯ ರಾಷ್ಟ್ರೀಯ ಸಮಾವೇಶ ನಡೆಯಲಿದ್ದು ಸಂಘದ ಅಧ್ಯಕ್ಷ ಡಾ.ಅಜಿತ್ ಕುಮಾರ್, ಕಾರ್ಯದರ್ಶಿ ಡಾ.ಅರುಳ್‍ವನನ್ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ.ರೋಶನ್ ಪಿಂಟೋ, ಆಡಳಿತಾಧಿಕಾರಿ ಡಾ.ಪ್ರಜ್ಞಾ ಆಳ್ವ, ಸಮಾವೇಶದ ಆಯೋಜಕ ಡಾ.ವೈ.ಎಂ.ಖಾದ್ರಿ, ಡಾ.ಅರ್ಚನಾ ಸಿ.ಇಂಗೋಲೆ, ಭಾರತೀಯ ಹೋಮಿಯೋಪಥಿ ವೈದ್ಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಪ್ರವೀಣ್ ರೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.