ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನರ್ಸಿಂಗ್ ಕಾಲೇಜು ಹಾಗೂ ಆಳ್ವಾಸ್ ನರ್ಸಿಂಗ್ ಸೈನ್ಸ್‍ನ ವಾರ್ಷಿಕೋತ್ಸವ, ದೀಪಪ್ರಜ್ವಲನೆ ಕಾರ್ಯಕ್ರಮ ಶನಿವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.ಬೇಸಿಕ್ ಬಿ.ಎಸ್‍ಸಿ ನರ್ಸಿಂಗ್ 23ನೇ ಬ್ಯಾಚ್ ಹಾಗೂ ಜನರಲ್ ನರ್ಸಿಂಗ್ ಹಾಗೂ ಮಿಡ್‍ವೈಫರಿ 24ನೇ ಬ್ಯಾಚ್‍ನ ಒಟ್ಟು 93 ವಿದ್ಯಾರ್ಥಿಗಳು ದೀಪ ಹಿಡಿದು ಪ್ರತಿಜ್ಞೆವಿಧಿ ಸ್ವೀಕರಿಸಿದರು.
ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಚುನಾಯಿತ ಸೆನೆಟ್ ಸದಸ್ಯ ಡಾ.ಶರಣ್ ಜೆ.ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿದರು.
ಸಮಾರಂಭದ ಮುಖ್ಯ ಅತಿಥಿ, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಚುನಾಯಿತ ಸೆನೆಟ್ ಸದಸ್ಯ ಸೋಮಶೇಖರಯ್ಯ ಕಲ್ಮಟ್ ಪ್ರತಿಜ್ಞಾವಿಧಿ ಬೋಧಿಸಿದರು. ಎಲ್ಲರಲ್ಲಿಯೂ ಸಮಾನ ಪ್ರತಿಭೆಗಳಿರುವುದಿಲ್ಲ. ಆದರೆ ಪ್ರತಿಯೊಬ್ಬರಲ್ಲಿಯೂ ತಮ್ಮ ಪ್ರತಿಭೆಗಳನ್ನು ಉತ್ತಮಗೊಳಿಸುವ ಅವಕಾಶಗಳಿವೆ. ಯುವಕರಲ್ಲಿ ಶ್ರೇಷ್ಠ ಶಕ್ತಿ ಇರುತ್ತದೆ. ಆ ಶಕ್ತಿಯ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳಗಿ ತಮ್ಮ ಕ್ಷೇತ್ರದಲ್ಲೂ ಉತ್ತಮ ಸೇವೆ ಮಾಡುವಂತಹ ಕೆಲಸ ವಿದ್ಯಾರ್ಥಿಗಳಿಂದಾಗಬೇಕು. ಅಧ್ಯಯನದ ಸಮಯದಲ್ಲಿ ಪ್ರಶ್ನಿಸುವ ಗುಣ ಬೆಳೆಸಿದಲ್ಲಿ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಅನ್ವೇಷನೆ, ಹೊಸತನವಿರುತ್ತದೆ. ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ಕ್ಯಾಂಪಸ್‍ಗೆ ಜೀವಕಳೆ ತುಂಬಬೇಕು. ಮುಂದಿನ ಆಯ್ಕೆಯ ಬಗ್ಗೆ ಚಿಂತನೆ ನಡೆಸುವ ಮೊದಲು ನಮ್ಮೊಳಗೆ ಚೈತನ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾಲಯದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಜ್ಯೋತಿ ನಾಯಕ್ ಹಾಗೂ ಜೊಸ್ಲಿನ್ ಕ್ಲೇರಾ ಡಿ’ಸೋಜ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ ಯತಿಕುಮಾರ್ ಸ್ವಾಮೀ ಗೌಡ, ಕಾಲೇಜಿನ ಸಹ ಆಡಳಿತಾಧಿಕಾರಿ ಜೋಬಿನ್ ಜೋಸೆಫ್ ಉಪಸ್ಥಿತರಿದ್ದರು.
ಪ್ರೊ.ಆಶಾ ಸಿಂಥಿಯ ಡೇಸಾ ಸ್ವಾಗತಿಸಿದರು. ಪ್ರೊ. ಗಾನವತಿ ಕೆ.ಎಂ ದೀಪಪ್ರಜ್ವಲನೆ ದಿನದ ಮಹತ್ವ ತಿಳಿಸಿದರು. ಪುನರ್ವ ಎಂ.ಎಚ್ ಸಾಧಕ ವಿದ್ಯಾರ್ಥಿಗಳ ವಿವರ ವಾಚಿಸಿದರು. ಡೆಲ್ಫಿ ಕಾರ್ಯಕ್ರಮ ನಿರೂಪಿಸಿದರು. ಶೈಲಾ ಮರಿಯಾ ಡಿ’ಸೋಜ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.