ಆಳ್ವಾಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮೂಡಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸೈನಿಕ ದಳ (ಆರ್ಮಿ ವಿಂಗ್) ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವೆನ್‍ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.

ಬೆಳಿಗ್ಗೆ ಕಾಲೇಜಿನ ಕಾಮರ್ಸ್ ಹಾಲ್‍ನಲ್ಲಿ ಪ್ರಾರಂಭವಾದ ರಕ್ತದಾನ ಶಿಬಿರದಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ರಾಷ್ಟ್ರೀಯ ಯುವ ಸೈನಿಕ ದಳ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರು ಸೇರಿದಂತೆ ಸುಮಾರು 198 ಮಂದಿ ರಕ್ತದಾನ ಮಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವೆನ್‍ಲಾಕ್ ಆಸ್ಪತ್ರೆಯ ಲ್ಯಾಬ್ ಮೇಲ್ವಿಚಾರಕ ಆ್ಯಂಟನಿ, “ಆಳ್ವಾಸ್ ಕಾಲೇಜಿನ ವತಿಯಿಂದ ನಡೆಸಿದ ಎಲ್ಲಾ ರಕ್ತದಾನ ಶಿಬಿರಗಳೂ ಜನರ ಹಾಗೂ ರೋಗಿಗಳ ಅಗತ್ಯವನ್ನು ಪೂರೈಸುವಲ್ಲಿ ಸಹಕಾರಿಯಾಗಿವೆ. 2019ರ ಜೂನ್‍ವರೆಗಿನ ಅಂಕಿ-ಅಂಶಗಳ ಪ್ರಕಾರ 1500ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದ್ದು ಇದು ಜಿಲ್ಲೆಯಲ್ಲೇ ಅತ್ಯಧಿಕ. ಈ ಸಹಕಾರ ಸದಾ ಇರಲಿ.” ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ವೆನ್‍ಲಾಕ್ ಆಸ್ಪತ್ರೆಯ ಡಾ. ನಂದನ್, ಲ್ಯಾಬ್ ಮೇಲ್ವಿಚಾರಕ ಆ್ಯಂಟನಿ, ಸಿಬ್ಬಂದಿ ವರ್ಗ, ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಯುವ ಸೈನಿಕ ದಳ (ಆರ್ಮಿ ವಿಂಗ್) ಅಧಿಕಾರಿ ಕ್ಯಾಪ್ಟನ್ ಡಾ. ಬಿ. ರಾಜೇಶ್ ಮತ್ತು ಸದಸ್ಯರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೊ. ವಸಂತ್ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು. ಜೂನಿಯರ್ ಅಂಡರ್ ಆಫೀಸರ್ ಸ್ವಪ್ನಗೌರಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೆಡೆಟ್ ಜೆಸಿಕಾ ಸ್ವಾಗತಿಸಿ, ದೀಕ್ಷಾ ಪೈ ವಂದಿಸಿದರು.

Highslide for Wordpress Plugin