ಆಳ್ವಾಸ್ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಿಂದ ನಾಯಕತ್ವ ಶಿಬಿರ

ಮೂಡುಬಿದಿರೆ: ಒಬ್ಬ ವ್ಯಕ್ತಿ ಎಲ್ಲಾ ಭಯಗಳಿಂದ ಮುಕ್ತನಾಗಬೇಕು. ಭಯದಲ್ಲಿರುವ ವ್ಯಕ್ತಿ ಯಾವುದೇ ವಿಷಯವನ್ನು ಸರಿಯಾಗಿ ನೋಡಲಾರ; ಅದರ ಬಗ್ಗೆ ಕೂಲಂಕುಷವಾಗಿ ಯೋಚಿಸಲಾರ. ಈ ಭಯದಿಂದ ಬಿಡುಗಡೆಯಾದಾಗ ಮಾತ್ರ ವ್ಯಕ್ತಿಗೆ ನಿಜವಾದ ಸ್ವಾತಂತ್ರ್ಯ ದೊರಕಲು ಸಾಧ್ಯ.  ಹೀಗೆ ಸ್ವತಂತ್ರವಾಗಿ ಯೋಚಿಸುವ, ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವ ವ್ಯಕ್ತಿ ಒಬ್ಬ ಉತ್ತಮ ನಾಯಕನಾಗಲು ಸಾಧ್ಯ. ಅಂತಹ ನಾಯಕ ಯಾವುದೇ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ’ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.
ಆಳ್ವಾಸ್ ಸಮೂಹ ಸಂವಹನ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜನೆಗೊಂಡಿರುವ `ನಾಯಕತ್ವ ಶಿಬಿರ’ದ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು. `ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ವಿಭಿನ್ನವಾಗಿ ನೋಡುವ, ಅದರ ಬಗ್ಗೆ ಆಮೂಲಾಗ್ರವಾಗಿ ಚಿಂತಿಸುವ ಧೋರಣೆಯನ್ನು ಬೆಳೆಸಿಕೊಳ್ಳಬೇಕು. ಅರಿವಿನ ಕೊರತೆಯಿರುವ ಪತ್ರಕರ್ತ ಸಮಾಜಕ್ಕೆ ಯಾವ ಕೊಡುಗೆಯನ್ನೂ ನೀಡಲಾರ. ಆದ್ದರಿಂದ ವಿಷಯದ ಬಗೆಗೆ ಸಂಪೂರ್ಣ ಜ್ಞಾನ, ಸಂಶೋಧನಾ ಪ್ರವೃತ್ತಿ ಹಾಗೂ ಸ್ವನಿಯಂತ್ರಣ ಮನೋಭಾವಗಳನ್ನು ಒಬ್ಬ ಪತ್ರಕರ್ತ ಬೆಳೆಸಿಕೊಳ್ಳಬೇಕು. ಈ ಅಂಶಗಳನ್ನು ಅಳವಡಿಸಿಕೊಂಡಾಗ ಯಾವುದೇ ಸನ್ನಿವೇಶವನ್ನು ನಿಭಾಯಿಸಲು ಒಬ್ಬ ಪತ್ರಕರ್ತ ಸಮರ್ಥನಾಗಿರುತ್ತಾನೆ. ಇಂತಹ ಪತ್ರಕರ್ತರು ಒಳ್ಳೆಯ ಸುದ್ದಿಗಳನ್ನು ನೀಡುತ್ತಾರೆ; ತನ್ಮೂಲಕ ಒಳ್ಳೆಯ ನಾಯಕರೆನಿಸಿಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, `ಈ ನಾಯಕತ್ವ ಶಿಬಿರದಿಂದ ಉತ್ತಮ ನಾಯಕರು ಹೊರಬರುವಂತಾಗಲಿ’ ಎಂದು ಶುಭ ಹಾರೈಸಿದರು.
ಆಳ್ವಾಸ್ ನ್ಯೂಸಿಯಂನ ಸಂಯೋಜಕ ಶ್ರೀಕರ್ ಭಂಡಾರ್ಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಪೆಜತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಶ್ರೀನಿವಾಸ ಹೊಡೆಯಾಲ ವಂದಿಸಿದರು. ಶ್ರೀಗೌರಿ ಎಸ್.ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ತರಬೇತಿ ಶಿಬಿರದವು  ಪತ್ರಿಕೋದ್ಯಮದ ವಿವಿಧ ಅಂಶಗಳ ಬಗೆಗಿನ ಚರ್ಚೆಯನ್ನು ಹೊಂದಿದ್ದು, `ಟಿ.ವಿ. ಮಾಧ್ಯಮ ಮತ್ತು ಸವಾಲುಗಳು’,  `ಸುದ್ದಿಯನ್ನು ಆಕರ್ಷಕವಾಗಿ ಕೊಡುವ ವಿಧಾನಗಳು’,  `ಕಾರ್ಯಕ್ರಮ ಆಯೋಜನೆ’, `ಪತ್ರಿಕೋದ್ಯಮ-ಶೈಕ್ಷಣಿಕ ಕ್ಷೇತ್ರ ಮತ್ತು ಸವಾಲುಗಳು’, `ಸಂಶೋಧನೆ’, `ಮುದ್ರಣ ಮಾಧ್ಯಮದಲ್ಲಿನ ಅವಕಾಶಗಳು’, `ಸ್ವಂತ ಮಾಧ್ಯಮ ನಿರ್ವಹಣೆ-ಸವಾಲುಗಳು’, `ಸಾಮಜಿಕ ಮಾಧ್ಯಮಗಳು’, `ಸೃಜನಶೀಲತೆ ಮತ್ತು ಹೊಸತನ’ ಎಂಬ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದೆ.

Highslide for Wordpress Plugin