ವಿದ್ಯಾಗಿರಿ: ಬದಲಾವಣೆ ಜಗದ ಸಹಜ ನಿಯಮ, ಆ ಬದಲಾವಣೆಯನ್ನು ಒಪ್ಪಿಕೊಳ್ಳದೇ ಇದ್ದರೆ ನಾವು ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಜಗತ್ತಿನ ತಂತ್ರಜ್ಞಾನಗಳಲ್ಲಿ ಆಗುತ್ತಿರುವ ಬದಲಾವಣೆಗೆ ಒಗ್ಗಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ದುಬೈ ಹೈಯರ್ ಕಾಲೇಜಸ್ ಆಫ್ ಟೆಕ್ನಾಲಜಿಯ ಉಪನ್ಯಾಸಕರಾದ ಡಾ. ಶ್ರೀಶಾ ಎಂ. ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ `ಆನಿಮೇಶನ್ ವಿಭಾಗದ ಅವಕಾಶಗಳು ಹಾಗೂ ಸವಾಲುಗಳು` ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಇಂದು ಪ್ರತಿಯೊಂದು ವಿಷಯವು ಡಿಜಿಟಲೀಕರಣಗೊಳ್ಳುತ್ತಿದ್ದು, ಸಾಂಪ್ರದಾಯಿಕ ಮಾಧ್ಯಮಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಮಾತ್ರವಲ್ಲ ಪ್ರತಿಯೊಂದರಲ್ಲೂ ಶೀಘ್ರತೆಯನ್ನು ಬಯಸುವ ಜನರ ಗ್ರಹಿಕಾ ಸಾಮಥ್ರ್ಯವೂ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಇಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಕಡಿಮೆ ಸಮಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಿಷಯಗಳನ್ನು ಮನಮುಟ್ಟುವಂತೆ ತಿಳಿಸಿಬೇಕು. ಇದಕ್ಕಾಗಿ ಆನಿಮೇಶನ್ ಹಾಗೂ ವಿಎಫೆಕ್ಸ್ ನಂತಹ ವಿಡಿಯೋ ತಂತ್ರಜ್ಞಾನಗಳಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ಮುದ್ರಣಾ ಮಾಧ್ಯಮದ ಭವಿಷ್ಯ ವಿಡಿಯೋಗಳ ಮೇಲೆ ಹೆಚ್ಚು ಅವಲಂಬಿಸಿದೆ ಎಂದು ತಿಳಿಸಿದರು.
ಆನಿಮೇಶನ್ ಎಂಬುದು ಕೇವಲ ಪ್ರಸಾರ ಮಾಧ್ಯಮಕ್ಕೆ ಸೀಮಿತವಾಗಿರದೇ, ಮುದ್ರಣ ಮಾಧ್ಯಮದಲ್ಲೂ ತನ್ನದೇ ಛಾಪನ್ನು ಮೂಡಿಸುತ್ತಿದೆ. ಜಗತ್ತಿನಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಆನಿಮೇಷನ್ ಹಾಗೂ ವಿಎಫ್ಎಕ್ಸ್ ತಂತ್ರಜ್ಞಾನಗಳು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಭಾವವನ್ನು ಬೀರುತ್ತಿವೆ. ಈ ತಂತ್ರಜ್ಞಾನವು ಜಾಹೀರಾತು, ಮುದ್ರಣ ಮಾಧ್ಯಮ, ಸಿನಿಮಾ ಹಾಗೂ ಕಾರ್ಟೂನಂತಹ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದ್ದು, ಸೃಜನಶೀಲತೆಯನ್ನು ಹೊಂದಿರುವ ಪ್ರತಿಯೊಬ್ಬರೂ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ, ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳಬಹುದು ಎಂದರು.
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯಗಳೆಂಬುದು ಅತಿಮುಖ್ಯ. ಆದರೆ ಇಂದಿನ ದಿನಗಳಲ್ಲಿ ಈ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಎಡವಿದ್ದಾರೆ. ಮಾತ್ರವಲ್ಲ ತಮ್ಮ ಸಾಮಥ್ರ್ಯದ ಕುರಿತ ಅರಿವು ಕೂಡ ತಮಗಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಂಡು, ಉತ್ತಮ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಪೆಜತ್ತಾಯ, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಮತ್ತಿತ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಸಮನ್ ನಿರೂಪಿಸಿದರು.