ಮೂಡಬಿದಿರೆ: ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗಾಗಿ ಮೂರು ಸಾವಿರಕ್ಕೂ ಅಧಿಕ ಕಾನೂನುಗಳಿದ್ದು, ಇದರ ಸದುಪಯೋಗವನ್ನು ಮಹಿಳೆಯರು ಹಾಗೂ ಮಕ್ಕಳು ಪಡೆಯಬೇಕು ಎಂದು ವಕೀಲೆ ಹಾಗೂ ನೋಟರಿ ಶ್ವೇತಾ ಕೆ ತಿಳಿಸಿದರು.
ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಯರಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ಬಡವರಿಗೆ ಉಚಿತ ಕಾನೂನಿನ ವ್ಯವಸ್ಥೆಯಿದ್ದು, ಇದರ ಪ್ರಯೋಜನವನ್ನು ಅಗತ್ಯವಿದ್ದವರು ಪಡೆಯಬಹುದು ಎಂದು ತಿಳಿಸಿದರು. ಬಾಲ್ಯ ವಿವಾಹ ತಡೆ ಕಾನೂನು, ಪೋಕ್ಸೋ ಕಾನೂನು, ವರದಕ್ಷಿಣೆ ಕಿರುಕುಳದ ವಿರುದ್ದದ ಕಾನೂನುಗಳು ಮಹಿಳೆಯರನ್ನು ಇನ್ನಷ್ಟು ಸದೃಡಗೊಳಿಸಿವೆ ಎಂದರು. ಒಬ್ಬ ಅಪರಾಧಿಗೆ ಕಠಿಣ ಶಿಕ್ಷೆಯಾಗುವುದರಿಂದ ಉಳಿದವರಿಗೆ ಇದು ಪಾಠವಾಗಲೂ ಸಾಧ್ಯ. ಹಾಗಾಗಿ ಹೆಣ್ಣು ತನಗಾದ ಅನ್ಯಾಯವನ್ನು ಯಾವುದೇ ಅಂಜಿಕೆ ಇಲ್ಲದೆ ಹೇಳುವ ಮನಸ್ಥಿತಿ ಮೂಡಬೇಕು ಎಂದರು. ಹೆಣ್ಣು ಗಂಡೆಂಬ ಭೇದಬಾವ ನಮ್ಮ ಮನೆ-ಮನದಿಂದ ದೂರವಾದಗ ಸಮಾಜದಲ್ಲಿ ಹೆಣ್ಣಿಗೆ ಉತ್ತಮ ಸ್ಥಾನ ಲಭಿಸಲು ಸಾದ್ಯ ಎಂದರು. ನಂತರ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಸಂವಾದದಲ್ಲಿ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ಪ್ರೋ ವೇಣುಗೋಪಾಲ ಶೆಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತ ಪಡಿಸದೆ ಗಂಡು ಮಕ್ಕಳ ಸಮ್ಮುಖದಲ್ಲಿ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಲೂ ಸಾದ್ಯ ಎಂದರು. ಯಾವಾಗ ಹೆಣ್ಣು ಸಶಸ್ತ್ರಳಾಗಿ ಅನ್ಯಾಯವನ್ನು ಪ್ರಶ್ನಿಸುವ ಹಂತಕ್ಕೆ ಬರುತ್ತಾಳೋ ಅಂದು ಮಹಿಳೆಯ ಮೇಲಿನ ದೌರ್ಜನ್ಯ ಕೊನೆಗೊಳ್ಳಲು ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. ಸೌಜನ್ಯ ಸ್ವಾಗತಿಸಿ, ಧಾತ್ರಿ ನಿರೂಪಿಸಿದರು.