ಮೂಡುಬಿದಿರೆ: ಮಂಗಳೂರು ವಿ.ವಿ ಹಾಗೂ ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ವರ್ಧೆಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಮಂಗಳೂರು, ಉಡುಪಿ, ಕೊಡಗು ಜಿಲ್ಲೆಗಳ 23 ಪದವಿ ಕಾಲೇಜುಗಳ 194 ಪುರುಷ ಮತ್ತು 116 ಮಹಿಳಾ ಕ್ರೀಡಾಳುಗಳು ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ವಿಭಾಗದಲ್ಲಿ 9 ಹಾಗೂ ಮಹಿಳೆಯರ ವಿಭಾಗದಲ್ಲಿ 6 ಕ್ರೀಡಾಪಟುಗಳು ಭಾಗವಹಿಸಿದ್ದು ಪುರುಷರಲ್ಲಿ ಮೊದಲ 9 ಸ್ಥಾನ ಮತ್ತು ಮಹಿಳೆಯರ ಮೊದಲ 6 ಸ್ಥಾನಗಳನ್ನು ತನ್ನದಾಗಿಸಿಕೊಂಡು ಅದ್ವೀತಿಯ ಪ್ರದರ್ಶನ ನೀಡಿತು.
ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 10 ಅಂಕಗಳೊಂದಿಗೆ ಸತತವಾಗಿ 17ನೇ ಬಾರಿ ಹಾಗೂ ಮಹಿಳೆಯರ ವಿಭಾಗದಲ್ಲಿ ಕೂಡ 10 ಅಂಕಗಳೊಂದಿಗೆ ಸತತವಾಗಿ 16ನೇ ಬಾರಿ ಕುರುಂಜಿ ವಿಶ್ವನಾಥ ಗೌಡ ರೋಲಿಂಗ್ ಟ್ರೋಪಿ ಮತ್ತು ಕೈಕುರೆ ರಾಮಣ್ಣ ಗೌಡ ಮೆಮೋರಿಯಲ್ ರೋಲಿಂಗ್ ಟ್ರೋಪಿಯನ್ನು ಗಳಿಸುವ ಮೂಲಕ ಚಾಂಪಿಯನ್ ಆಗಿ ಮೂಡಿಬಂತು.
ಗುಡ್ಡಗಾಡು ಓಟದ ಪುರುಷರ ವಿಭಾಗದಲ್ಲಿ ಮೊದಲ 6 ಸ್ಥಾನಗಳನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜು ತನ್ನದಾಗಿಸಿಕೊಂಡಿದೆ. ಪ್ರಥಮ ಸ್ಥಾನವನ್ನು ನರೇಂದ್ರ ಪ್ರತಾಪ್ ಸಿಂಗ್, ದ್ವಿತೀಯ ದಿನೇಶ್, ತೃತೀಯ ಆದೇಶ್, ಚತುರ್ಥ ಅಬ್ದುಲ್ ಬಾರಿ, 5ನೇ ಸ್ಥಾನ ಬಹುದ್ದೂರ್ ಪಟೇಲ್, 6ನೇ ಸ್ಥಾನ ಖಷ್ಮೇಶ್ ಕುಮಾರ್ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿಯೂ ವೈಯಕ್ತಿಕ ಮೊದಲ 6 ಸ್ಥಾನಗಳನ್ನು ಆಳ್ವಾಸ್ ಕಾಲೇಜು ಪಡೆದಿದೆ. ಪ್ರಥಮ ಅಂಕಿತ, ದ್ವಿತೀಯ ಚೈತ್ರಾ ದೇವಾಡಿಗ, ತೃತೀಯ ಪ್ರಿಯಾ ಎಲ್.ಡಿ, ಚುತುರ್ಥ ಹರ್ಷಿತಾ ಕೆ, 5ನೇ ಸ್ಥಾನವನ್ನು ಅಮೃತ (ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು), 6ನೇ ಸ್ಥಾನ ದಿಕ್ಷಾ ಬಿ ಪಡೆದುಕೊಂಡರು.
ಆಳ್ವಾಸ್ ಕ್ರೀಡಾಪಟುಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.