`ಲೈಫ್‍ಆಫ್ ಬಟರ್‍ಫ್ಲೈಸ್’ ಸಾಕ್ಷ್ಯಚಿತ್ರ ಬಿಡುಗಡೆ

ವಿದ್ಯಾಗಿರಿ: ಪ್ರಕೃತಿಯ ಮೇಲೆ ಪ್ರೀತಿ ಮತ್ತು ಕಾಳಜಿ ತೋರಿದಾಗ ಮಾತ್ರ ರಕ್ಷಿಸಲು ಸಾಧ್ಯ ಎಂದು ಐ ನೇಚರ್ ವಾಚ್ ಫೌಂಡೇಷನ್‍ನ ಅಧ್ಯಕ್ಷ ಹಾಗೂ ಬಟರ್ ಪ್ಲೈ ಮ್ಯಾನ್ ಆಫ್ ಇಂಡಿಯಾ ಐಸಾಕ್ ಕೆಹಿಮ್‍ಕರ್ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಗಣದಲ್ಲಿ ನಡೆದ ಬೆಳುವಾಯಿ ಸಮ್ಮಿಲನ್ ಶೆಟ್ಟಿ’ಸ್ ಬಟರ್ ಫ್ಲೈಸ್ ಕನ್ಸರ್ವೇಶನ್ ಆ್ಯಂಡ್ ರಿಸರ್ಚ್ ಟ್ರಸ್ಟ್‍ನಿಂದ ನಿರ್ಮಾಣಗೊಂಡ `ಲೈಫ್‍ಆಫ್ ಬಟರ್‍ಫ್ಲೈಸ್’ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿ ಮಾನವನದಾಗಿರಬೇಕು. ಭಾರತದ ಸಸ್ಯ ಸಂಪತ್ತನ್ನು ವೀಕ್ಷಿಸಲು ಜೀವನವಿಡೀ ಸಾಲದು. ನಾವು ನಮ್ಮ ದೇಶದ ಸಸ್ಯ ಸಂಪತ್ತನ್ನು ಅರಿತುಕೊಳ್ಳಬೇಕು. ಅನಂತರ ಬೇರೆ ದೇಶದ ಸಸ್ಯಸಂಪತ್ತನ್ನು ಅರಿಯಬೇಕು. ಒಂದೊಳ್ಳೆಯ ವನ್ಯಜೀವಿ ಸಾಕ್ಷ್ಯ ಚಿತ್ರ ಚಿತ್ರಿಸಲು ಅಧಿಕ ತಾಳ್ಮೆ, ಗ್ರಹಿಕಾ ಸಾಮಥ್ರ್ಯ ಅತ್ಯವಶ್ಯಕಎಂದರು.

ಜೀವವೈವಿಧ್ಯಗಳು ಹಂತಹಂತವಾಗಿ ಬೆಳೆಯಲು ಅನೇಕ ಸವಾಲುಗಳನ್ನೆದುರಿಸುತ್ತವೆ. ಅದೇ ರೀತಿ ನಮ್ಮ ಜೀವನದಲ್ಲಿ ಬರುವ ಸವಾಲುಗಳನ್ನೆದುರಿಸಿ, ಮುಂದುವರಿಯುವುದು ಅತ್ಯಗತ್ಯ. ನಾವು ಪ್ರಕೃತಿಯ ನಡುವಿನಲ್ಲಿ ಜೀವಿಸುವಾಗ ಕೇವಲ ನಮ್ಮ ನೆಮ್ಮದಿ ಜೀವನವನ್ನು ಗುರಿಯಾಗಿಸದೇ, ಪಕೃತಿಯೊಡನೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳಬೇಕು.ಕೇವಲ ಚಿಟ್ಟೆಗಳ ಸೌಂದರ್ಯವನ್ನು ಪ್ರಶಂಸಿಸದೇ ಅದರ ಮಹತ್ತ್ವವನ್ನು ಅರಿತುಕೊಳ್ಳಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಡಿ.ಸಿ.ಎಫ್ ರುತ್ರೈನ್. ಪಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಪ್ರಕೃತಿಯನ್ನು ಸಂರಕ್ಷಿಸುವ ಜವಬ್ದಾರಿಯನ್ನು ಈ ಹಂತದಿಂದಲೇ ಹೊರಬೇಕು. ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಪ್ರಕೃತಿಯ ಭಾಗವಾಗಿದ್ದು, ಅವುಗಳ ಮಹತ್ವ ಹಾಗೂ ಮೌಲ್ಯಗಳ ಕುರಿತು ಅರಿವನ್ನು ಹೊಂದಿರಬೇಕು. ಅಭಿವೃದ್ಧಿ ಹಾಗೂ ರಕ್ಷಣೆ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬೆಳೆಯುತ್ತಿರಬೇಕು ಎಂದರು.

ಕಾರ್ಯಕ್ರಮದಲಿ ್ಲಒಂದುಗಂಟೆ ನಲವತ್ತು ನಿಮಿಷದ `ಲೈಫ್‍ಆಫ್ ಬಟರ್‍ಫ್ಲೈಸ್’ ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟಿ ಸಮ್ಮಿಲನ್ ಶೆಟ್ಟಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಚಿಟ್ಟೆ ಪ್ರಿಯರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿದ್ಯಾರ್ಥಿನಿ ಸಂಜನಾ ನಿರೂಪಿಸಿ, ಯಶಸ್ವಿನಿ ಪ್ರಸಾದ್ ವಂದಿಸಿದರು.

Highslide for Wordpress Plugin