ಜೇನುಹುಳುಗಳು ಜೀವವೈವಿಧ್ಯತೆಯ ಸಂರಕ್ಷಕರು: ಡಾ. ವಿಜಯಕುಮಾರ್ ಕೆ.ಟಿ.

ಮೂಡುಬಿದಿರೆ: ಜೀವಿಗಳಲ್ಲಿ ನಾಯಕತ್ವ, ನೈರ್ಮಲ್ಯತೆ ಹಾಗೂ ಪರಸ್ಪರ ಹೊಂದಾಣಿಕೆಯ ಗುಣಗಳಿಗೆ ಜೇನುಹುಳಗಳು ಮಾದರಿ. ಜೇನುಹುಳುಗಳು ಪ್ರಕೃತಿಯ ಜೀವವೈವಿಧ್ಯತೆಯ ಸಂರಕ್ಷಕರು. ಜೇನುಹುಳುಗಳ ಸಾಕಾಣಿಕೆ ಆದಾಯ ಗಳಿಕೆಗೆ ಒಂದು ಮಾರ್ಗ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನುಹುಳು ಮತ್ತು ಪರಾಗಸ್ಪರ್ಶಕಗಳ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಕೆ.ಟಿ. ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ ಇದರ ಜಂಟಿ ಸಹಯೋಗದೊಂದಿಗೆ ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಜೇನು ಸಾಕಾಣಿಕೆ ಮತ್ತು ನಿರ್ವಹಣೆಯ ಕುರಿತ ಒಂದು ದಿನದ ಪ್ರಾಯೋಗಿಕ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪರಿಸರದ ಸಸ್ಯತಳಿಗಳಲ್ಲಿ ಎಂಭತ್ತೇಳು ಶೇಕಡ ಸಸ್ಯಗಳು ಜೇನುಹುಳಗಳ ಮೇಲೆ ಪರಾಗಸ್ಪರ್ಶ ಕ್ರಿಯೆಗೆ ನೇರವಾಗಿ ಅವಲಂಬಿತವಾಗಿರುತ್ತವೆ. ಜೇನುಹುಳುಗಳು ನಶಿಸಿ ಹೋದರೆ ಆಹಾರ ಸರಪಳಿಯ ಮೇಲೆ ಪೂರ್ಣ ಪ್ರಮಾಣದ ಪರಿಣಾಮ ಬೀರುತ್ತದೆ. ಜೇನು ಸಾಕಾಣಿಕೆ ಒಂದು ಕೌಶಲ್ಯವಾಗಿದೆ. ಕರ್ನಾಟಕದಲ್ಲಿ ಐದು ತಳಿಯ ಜೇನು ಹುಳುಗಳೂ ಇರುವುದರಿಂದ ಜೇನು ಸಾಕಾಣಿಕೆಯನ್ನು ಉದ್ಯಮವಾಗಿಸಬಹುದು. ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಉತ್ಪಾದನೆಯಾಗುವ ಜೇನು, ಸಮೃದ್ಧವಾದ ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ ಈ ಭಾಗದ ಜನರು ಜೇನುಕೃಷಿಯಲ್ಲಿ ಹೆಚ್ಚಿನ ಒಲವು ತೋರಿಸಬೇಕೆಂದು ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಬೇಕು. ಜೇನು ಹುಳುಗಳ ಸಾಕಾಣಿಕೆಯ ಮಾಹಿತಿಯನ್ನು ರೈತರಿಗೆ ತಲುಪುವಂತೆ ಮಾಡಬೇಕು. ಜೇನು ನಿರ್ವಹಣೆಯಂತಹ ಕೌಶಲ್ಯಗಳು ಪರಿಸರ ಸಂರಕ್ಷಣೆಗೆ ಪೂರಕ ಅಂಶಗಳು ಎಂದರು. ಮಾಹಿತಿ ಕಾರ್ಯಕ್ರಮದ ಬಳಿಕ ಪ್ರಾಯೋಗಿಕ ನಿರ್ವಹಣೆಯನ್ನು ವಿವರಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದಿಂದ ತರಬೇತುದಾರರಾಗಿ ಸಂತೋಷ್ ಕುಮಾರ್ ಜೆ, ಶಭರೀಶ್ ಕುಮಾರ್ ಎಸ್., ನಿತಿನ್ ಕುಮಾರ್ ಹೆಚ್. ಎಲ್ ಭಾಗವಹಿಸಿದರು. ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕಿ ಡಾ. ರಶ್ಮಿ ಕೆ., ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಸ್ಥಳೀಯ ಗ್ರಾಮದ ರೈತರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಮೃದ್ಧಿ ಶೆಣೈ ವಂದಿಸಿದರು.

Highslide for Wordpress Plugin