ಸೃಷ್ಠಿ ಕ್ಲಬ್‍ನ ಉದ್ಘಾಟನೆ

ಮೂಡಬಿದಿರೆ: ಜೀವ ಸಂಕುಲವನ್ನು ಸಂರಕ್ಷಿಸುವ ಕಾರ್ಯಕ್ಕೆ ತೊಡಗುವ ಮೊದಲು, ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಕಾಪಾಡುವ ಕೆಲಸ ಮುಖ್ಯ ಎಂದು ಖ್ಯಾತ ವನ್ಯಜೀವಿ ಜೀವಶಾಸ್ತ್ರಜ್ಞ ಹಾಗೂ ವಿಜ್ಞಾನಿ ಸಂಜಯ್ ಗುಬ್ಬಿ ತಿಳಿಸಿದರು.
ಆವರು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಸೃಷ್ಠಿ ಕ್ಲಬ್‍ನ 2019-20 ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಕೃತಿಯನ್ನು ಅರಿಯದೆ ಹೊರತು, ನಮ್ಮಲ್ಲಿ ಅದರೆಡೆಗೆ ನಿಜವಾದ ಕಾಳಜಿ ಮೂಡದು. ನಮ್ಮ ನಿಜವಾದ ಪ್ರಕೃತಿಯೆಡೆಗಿನ ಆಸ್ಥೆ ಸಕಲ ಜೀವರಾಶಿಗಳು ತಮ್ಮ ಮೂಲ ಆವಾಸ ಸ್ಥಾನದಲ್ಲಿ ನಿರ್ಭಿತಿಯಿಂದ ವಾಸಿಸಲು ಅನುವುಮಾಡಿಕೊಡುವುದಾಗಿದೆ. ಈಗಾಗಲೇ ಅಳಿವಿನಂಚಿಗೆ ಸಾಗುತ್ತಿರುವ ಜೀವಿಗಳನ್ನು ಸಂರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು. ಅಲ್ಲದೇ ಇದೇ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಅಭಯಾರಣ್ಯಗಳಲ್ಲಿ ವಾಸಿಸುತ್ತಿದ್ದ, ಈಗ ಅಳಿದು ಹೋಗಿರುವ ಪ್ರಾಣಿ ಸಂಕುಲವನ್ನು, ಅವುಗಳ ಸಂತತಿ ನಶಿಸಲು ಕಾರಣವಾದ ಅಂಶವನ್ನು ಸವಿವರವಾಗಿ ತಿಳಿಸಿದರು. ಸೀಡಬಾಲ್‍ಗಳ ಬಳಕೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇವುಗಳ ಉಪಯೋಗವನ್ನು ಮಾಡದೇ ಇರುವುದು ಉತ್ತಮ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಹಾಗೂ ಪ್ರೀತಿಯನ್ನು ಕಾಪಾಡಿಕೊಂಡರೆ, ಹುಮ್ಮಸ್ಸಿನ ಚಿಲುಮೆ ಸದಾ ನಿಮ್ಮಲ್ಲಿ ನಲೆಸುತ್ತದೆ. ಯಾವುದೇ ಕೆಲಸ ನಿರ್ವಹಿಸಿದರೂ, ಅದು ನೀವು ನೆಲೆಸಿರುವ ಸಮಾಜದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‍ಮೆಂಟ್ ಟ್ರಸ್ಟೀ ವಿವೇಕ್ ಆಳ್ವ, ಆಳ್ವಾಸ್ ಕಾಲೇಜು ಪರಿಸರ ಸ್ನೇಹಿಯಾಗಿದ್ದು, ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇತ್ತೀಚೆಗಷ್ಟೇ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಗ್ರೀನ್ ಕ್ಯಾಂಪಸ್ ಪ್ರಶಸ್ತಿಯನ್ನು ಪಡೆದಿರುವುದು, ಅಮೂಲ್ಯ ಸಸ್ಯ ಸಂಪತ್ತಿನ ಆಗರವಾಗಿರುವ ಶೋಭಾವನ ನಿರ್ಮಾಣ, ಪಕ್ಷಿ ಹಾಗೂ ಚಿಟ್ಟೆ ಉದ್ಯಾನಗಳನ್ನು ಬೆಳೆಸುತ್ತಿರುವುದು ಪರಿಸರ ಸಂರಕ್ಷಣೆಯಲ್ಲಿ ನಮಗಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಯುವ ಮನಸ್ಸುಗಳು ಪರಿಸರ ಸಂರಕ್ಷಣೆಯನ್ನು ಕೇವಲ ಭಾವನಾತ್ಮಕವಾಗಿ ನೋಡದೆ, ತಮ್ಮ ಜೀವನದ ಭಾಗವಾಗಿ ಕೆಲಸ ಮಾಡಬೇಕು.
ಕಾರ್ಯಕ್ರಮದಲ್ಲಿ ಕ್ಲಬ್‍ನ ಸಂಯೋಜಕ ಯುವರಾಜ್, ಕ್ಲಬ್‍ನ ವಿದ್ಯಾರ್ಥಿ ಸಂಯೋಜಕ ಶಿಖರ್ ಉಪಸ್ಥಿತರಿದ್ದರು. ಅನಘಾ ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin