ತುಳು ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಕಳೆದ ಮೂವತ್ತು ವರ್ಷಗಳಿಂದ ತುಳು ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ತುಳುಜನರ ಮೇಲಿದೆ ಎಂದು ತುಳು ಸಂಸ್ಕøತಿ ಚಿಂತಕ ಡಾ.ವೈ.ಎನ್ ಶೆಟ್ಟಿ ತಿಳಿಸಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತುಳು ಸಂಘದ ವತಿಯಿಂದ ಜರುಗಿದ ಉದಿಪನದ ಲೇಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡು ಮತ್ತು ತುಳುವರಿಗೆ ಅವರದೇ ಆದ ವಿಶಿಷ್ಟ ಸಂಸ್ಕøತಿ ಇದೆ. ತುಳುವರು ಆರೋಗ್ಯಕ್ಕೆ ಅನುಗುಣವಾದ ಆಹಾರವನ್ನು ತಿನ್ನುತ್ತಾರೋ ಹೊರತು ನಾಲಗೆಯ ರುಚಿಗೆ ತಕ್ಕಂತೆ ಅಲ್ಲ. ಆದ್ದರಿಂದ ಅವರಿಗೆ ಆಹಾರವೇ ಔಷಧಿ. ಜಗತ್ತಿನ ಅತ್ಯಂತ ಒಳ್ಳೆಯ ಬ್ರೇಕ್‍ಫಾಸ್ಟ್‍ನ ಕುರಿತು ಯುನೆಸ್ಕೊ ನಡೆಸಿದ ಅಧ್ಯಯನದಲ್ಲಿ ಜಗತ್ತಿನ ತರಹೇವಾರಿ ಆಹಾರಗಳ ಪೈಕಿ
ತುಳುನಾಡಿನ ತಞಣ ಎಂಬ ಆಹಾರ ಆಯ್ಕೆಯಾದುದು ತುಳುನಾಡಿಗೇ ಹೆಮ್ಮೆ ತರುವಂತಹ ವಿಚಾರ.
ಇಂದಿನ ಜನಾಂಗ ಮೊಬೈಲ್‍ನ ವ್ಯಾಪಕ ಬಳಕೆಯಿಂದ ದಾರಿ ತಪ್ಪುತ್ತಿದ್ದಾರೆ. ಹಳೆಯ ಕಾಲದಲ್ಲಿದ್ದ 150 ಕ್ಕೂ ಮಿಕ್ಕ ಕ್ರೀಡೆಗಳು ಇಂದು ಅವನತಿಯತ್ತ ಕಾಲಿರಿಸಿದೆ. ನಮ್ಮ ಆಹಾರದಲ್ಲಾಗಿರುವ ಹೆಚ್ಚಿನ ಬದಲಾವಣೆಯು ದೈಹಿಕವಾಗಿ ಶಕ್ತಿಹೀನರನ್ನಾಗಿಸಿದೆ. ಹೀಗಾಗಿ ನಮ್ಮ ದಿನಚರಿಯು ತುಳುನಾಡಿನ ಸಂಸ್ಕøತಿಯನ್ನು ತೋರಿಸುವಂತದ್ದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು ತುಳು ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಂದ ಕಲ್ಕುಡ ಕಲ್ಲುರ್ಟಿ ತುಳು ನಾಟಕ ನಡೆಯಿತು.
ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗದ ಡೀನ್ ಪ್ರೋ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಾಯಲ್ ಜೆ.ಬಂಗೇರ ಸ್ವಾಗತಿಸಿ, ಸುರಕ್ಷಾ ಕುಂದಾಲ್ ವಂದಿಸಿದರು. ಮಾನ್ಸಿ ಶೆಟ್ಟಿ ನಿರೂಪಿಸಿದರು.