ವಾರ್ಷಿಕ ರೂ.33.85 ಕೋಟಿ ವಾರ್ಷಿಕ ಕೊಡುಗೆಗಳ ಲೋಕಾರ್ಪಣೆ
ಮೂಡುಬಿದಿರೆ : ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಮರುಕಳಿಸಬೇಕೆನ್ನುವ ಸಂಸ್ಥೆ ಆಳ್ವಾಸ್. ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕøತಿಕವಾದ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಸಮಾಜಕ್ಕೆ ನಿಜವಾದ ಆಸ್ತಿಗಳನ್ನಾಗಿ ರೂಪಿಸುವ ಕನಸು, ಅದಕ್ಕೆ ಪೂರಕವಾದ ಕೆಲಸವನ್ನು ಮಾಡುವ ಮೂಲಕ ರಾಜ್ಯದಲ್ಲಿ ಅತ್ಯಂತ ಅನುಕರಣೀಯ ವ್ಯಕ್ತಿ ಮೋಹನ ಆಳ್ವ ಮತ್ತು ಸಂಸ್ಥೆ ಆಳ್ವಾಸ್ ಆಗಿದ್ದು ವಾರ್ಷಿಕವಾಗಿ ರೂ. 33.85 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಸೇವೆಯನ್ನು ಮಾಡುವಂತಹ ಉತ್ತಮ ಹಾಗೂ ಅಪರೂಪದ ಕೆಲಸವನ್ನು ಮಾಡುತ್ತಿರುವ ಆಳ್ವಾಸ್ಗೆ ಸದಾ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಅವರು ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ನೆರವು ಘೋಷಣೆ ಹಾಗೂ ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆ. ಸರ್ಕಾರಿ ಸಮ್ಮೇಳನವನ್ನೇ ಮೀರುವಂತೆ ವ್ಯವಸ್ಥಿತ ರೀತಿಯಲ್ಲಿ ಸಾಹಿತ್ಯ, ಸಾಂಸ್ಕøತಿಕ ಉತ್ಸವ ಆಯೋಜನೆ ಮಾಡುತ್ತಿರುವುದು ಮಾದರಿ ಕೆಲಸ. ಸಮಗ್ರ ಶಿಕ್ಷಣ ಪರಿಕಲ್ಪನೆಯ ಶಿಕ್ಷಣ ವ್ಯವಸ್ಥೆ ಆಳ್ವಾಸ್ನಲ್ಲಿ ಸಿಗುತ್ತಿರುವುದು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಎಂದರು.
ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಮುಖ್ಯ ಅತಿಥಿಯಾಗಿ ಮಾತನಾಡಿ, ವ್ಯಕ್ತಿ ಹಾಗೂ ಸಂಸ್ಥೆಗಳ ಒಳ್ಳೆಯ ಗುಣಗಳ ಆಧಾರದಲ್ಲಿ ನಾವು ಗುರುತಿಸಿ ಗೌರವಿಸಬೇಕಾಗಿದೆ. ಮಾಧ್ಯಮಗಳು ಯಾವಾಗ ಸಕಾರತ್ಮಕ ಸುದ್ದಿಗಳನ್ನು ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ, ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಆಗಿ ಕೊಡುತ್ತದೋ ಅವಾಗ ಜನರು ಕೂಡ ಸಕಾರತ್ಮವಾಗಿರುತ್ತಾರೆ. ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು ಲೀಡ್ ಸುದ್ದಿಯಾಗುವಂತದ್ದು. ಮಾಧ್ಯಮ ಮಾತ್ರವಲ್ಲ ಸಮಾಜವು ಕೂಡ ಉತ್ತಮ ಕೆಲಸ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.
ಪೇಜಾವರಶ್ರೀ ಅವರ ನೇತೃತ್ವದ ಗೋವರ್ದನ ಗಿರಿ ಟ್ರಸ್ಟ್ಗೆ ಆಳ್ವಾಸ್ನಿಂದ ಒಂದು ಲಕ್ಷ ರೂಪಾಯಿಯ ಡಿ.ಡಿಯನ್ನು ಪೇಜಾವರಶ್ರೀಗಳಿಗೆ ಹಸ್ತಾಂತರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಯೋಜನೆಗಳ ವಿವರ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿದ್ದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
2019-20 ನೇ ಸಾಲಿನಲ್ಲಿ ವಿಧ್ಯಾರ್ಥಿಗಳಿಗೆ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿರುವ ರೂ.33.85 ಕೋಟಿ ವಾರ್ಷಿಕ ಉಚಿತ ಕೊಡುಗೆಗಳ ವಿವರವನ್ನು ಸಮಾರಂಭದಲ್ಲಿ ಡಾ.ಎಂ ಮೋಹನ ಆಳ್ವ ಘೋಷಿಸಿದರು. ಆಳ್ವಾಸ್ ಪ್ರತಿಷ್ಠಾನದ ವಿವಿಧ ಶೈಕ್ಞಣಿಕ ಸಂಸ್ಥೆಗಳಲ್ಲಿ ಕ್ರೀಡೆ, ಶಿಕ್ಷಣ, ಸಾಂಸ್ಕøತಿಕ ಚಟುವಟಿಕೆ ವ್ಯಾಪ್ತಿಗೆ ಬರುವ 4,543 ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆಗೆ ಸ್ಕೌಟ್ ಗೈಡ್ಸ್ ಕನ್ನಡ ಭವನ ನಿರ್ಮಾಣ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ, ಎಚ್ಐವಿ ಪೀಡಿತರಿಗೆ, ನುಡಿಸಿರಿ ಘಟಕ ನಿರ್ವಹಣೆ, ಕ್ರೀಡಾಕೂಟಗಳ ಆಯೋಜನೆಗೆ ಸಹಿತ ಹಲವು ಚುಟವಟಿಕೆಗಳಿಗೆ ಒಟ್ಟು ರೂ.33.85 ಕೋಟಿ ವಾರ್ಷಿಕ ಉಚಿತ ಕೊಡುಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.