ಮೂಡುಬಿದಿರೆ: ಕಷ್ಟಕಾಲದಲ್ಲಿ ನೆರವಾಗುವ ಜತೆಗೆ ಜಗತ್ತಿನಾದ್ಯಂತ ಸ್ನೇಹ ಸಂಬಂಧ ಬೆಸೆಯುವ ಹವ್ಯಾಸಿ ರೇಡಿಯೋ(ಹ್ಯಾಮ್) ನಿರ್ವಾಹಕರು ಸಂವಹನದ ಸೈನಿಕರಿದ್ದರಂತೆ ಎಂದು ಭಾರತೀಯ ಹ್ಯಾಮ್ಸ್ ಸಂಸ್ಥೆ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಹ್ಯಾಮ್ಸ್)ಯ ನಿರ್ದೇಶಕ ಡಾ.ಎಸ್.ಸತ್ಯಪಾಲ್ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ಹ್ಯಾಮ್ ರೇಡಿಯೋ’ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ರೇಡಿಯೋ ಸಂವಹನದಲ್ಲಿ ಆಸಕ್ತಿಯಿರುವ ವ್ಯಕ್ತಿ ತನ್ನ ಮನೆಯಲ್ಲೇ ರೇಡಿಯೋ ಕೇಂದ್ರ ತೆರೆದು, ಅನೇಕ ಪ್ರಯೋಗಗಳನ್ನು ನಡೆಸುವ ಅವಕಾಶವನ್ನು ಹ್ಯಾಮ್ ರೇಡಿಯೋ ಒದಗಿಸುತ್ತದೆ ಎಂದರು.
ಹ್ಯಾಮ್ ರೇಡಿಯೋಗಳ ಮಹತ್ವ ವಿವರಿಸಿದ ಅವರು, ಜಗತ್ತಿನ ಇತರ ಭಾಗದಲ್ಲಿರುವ ಹ್ಯಾಮ್ ರೆಡಿಯೋ ನಿರ್ವಾಹಕರೊಂದಿಗೆ ಸ್ನೇಹ ಸಂಪಾದಿಸಬಹುದು. ಭೂಕಂಪ, ಸುನಾಮಿಯಂತಹ ವಿಕೋಪಗಳ ಸಂದರ್ಭ ಆಧುನಿಕ ಸಂವಹನ ಮಾಧ್ಯಮಗಳು ನೆಲಕಚ್ಚಿದಾಗ ನೆರವಿಗೆ ಬರುವುದು ಹ್ಯಾಮ್ ರೇಡಿಯೋಗಳು ಹಾಗೂ ಅದರ ನಿರ್ವಹಣೆ ಹೊಣೆ ಹೊತ್ತ ರೇಡಿಯೋ ನಿರ್ವಾಹಕರು ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್‍ಮೆಂಟ್ ಟ್ರಸ್ಟೀ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನ ಹಾಗೂ ಅದರ ಪರಿಣಾಮಕಾರಿ ಬಳಕೆಯ ಕುರಿತಾದ ಅರಿವು ಹೊಂದಿರಬೇಕಾದ್ದು ಇಂದಿನ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಡೀನ್ ಡಾ. ದತ್ತಾತ್ರೇಯ ಉಪಸ್ಥಿತರಿದ್ದರು.