ನಾಳೆ ಅಖಿಲ ಭಾರತ ವಿ.ವಿ. ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಖಿಲ ಭಾರತ ವಿ.ವಿ. ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್ ಅಕ್ಟೋಬರ್ 6ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ ಅಖಿಲ ಭಾರತ ಅಂತರ್ ವಿ.ವಿ. ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟದ ನಿರ್ದೇಶನದಲ್ಲಿ ನಡೆಯಲಿರುವ ಚಾಂಪಿಯನ್‍ಶಿಪ್‍ನಲ್ಲಿ ದೇಶದ ಸುಮಾರು 175 ವಿ.ವಿಗಳಿಂದ 1,600 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಅ.6ರಂದು ಬೆಳಗ್ಗೆ 7 ಗಂಟೆಗೆ ಮೂಡಬಿದಿರೆ ನಿಶ್ಮಿತಾ ಟವರ್ಸ್ ಬಳಿಯಿಂದ 10ಕಿಮೀ ಸ್ವರ್ಧೆ ಆರಂಭವಾಗಲಿದ್ದು ಮೂಡಬಿದಿರೆ ಮುಖ್ಯರಸ್ತೆಯಾಗಿ ಸಾಗಿ ಮಹಾವೀರ ಕಾಲೇಜು, ಜೈನ್ ಪಿಯು ಕಾಲೇಜು, ಅಲಂಗಾರ್ ಮಾರ್ಗವಾಗಿ ಸ್ವರಾಜ್ಯ ಮೈದಾನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಓಟ ಸಮಾಪನಗೊಳ್ಳಲಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಚಾಂಪಿಯನ್‍ಶಿಪ್‍ಗೆ ಚಾಲನೆ ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಅಧ್ಯಕ್ಷತೆವಹಿಸಲಿದ್ದಾರೆ.  ಮೂಡಬಿದಿರೆಯ ಮುಖ್ಯ ರಸ್ತೆ ಹಾಗೂ ಸ್ವರ್ಧೆಯ ಮಾರ್ಗದ ಉದ್ದಕ್ಕೂ ಪೋಲಿಸ್ ಇಲಾಖೆಯ ಮೂಲಕ ಸಕಲ ಸಂಚಾರಿ ನಿಯಂತ್ರಣ ವ್ಯವಸ್ಥೆಯನ್ನು ಮಾಡಲಾಗಿದ್ದು ಸ್ವರ್ಧಿಗಳಿಗೆ ಅನುಕೂಲವಾಗುವಂತೆ ಡಿಜಿಟಲ್ ಕಾಲಮಾಪನವನ್ನು ಅಳವಡಿಸಲಾಗುವುದು. ಕೂಟದಲ್ಲಿ ಸ್ಥಾನ ನಿರ್ಣಯ ಹಾಗೂ ಸಮಯ ಪಾಲನೆಯನ್ನು ನಿಭಾಯಿಸುವ ಅತ್ಯಾಧುನಿಕ ಟ್ರಾನ್ಸ್‍ಪಾಂಡರ್ ವ್ಯವಸ್ಥೆಯ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುವುದು ಎಂದರು.
2015ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಹಾಗೂ 2016ರಲ್ಲಿ ಮಂಗಳೂರು ವಿ.ವಿ. ಮೂಲಕ ಅಖಿಲ ಭಾರತ ಅಂತರ್ ವಿ.ವಿ. ಕ್ರಾಸ್‍ಕಂಟ್ರಿ ಸ್ವರ್ಧೆಯನ್ನು ನಮ್ಮ ಸಂಸ್ಥೆಯಲ್ಲಿ ಯಶ್ವಸಿಯಾಗಿ ಸಂಘಟಿಸಿದ್ದು ಇವರಿಗೆ 3ನೇ ಬಾರಿ ಈ ಕೂಟವನ್ನು ಮಾದರಿ ಕೂಟವನ್ನಾಗಿ ಸಂಘಟಿಸಲು ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಅಖಿಲಭಾರತ ಅಂತರ್ ವಿ.ವಿ ಕ್ರಾಸ್‍ಕಂಟ್ರಿ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಕಳೆದ 4 ವರ್ಷಗಳಿಂದ ಮಂಗಳೂರು ವಿ.ವಿ. ತಂಡ ಚಾಂಪಿಯನ್ ಆಗಿ ಮೂಡಿಬಂದಿದ್ದು ಈ ಬಾರಿಯೂ ತಂಡ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದರು.
ಮಂಗಳೂರು ವಿ.ವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

Highslide for Wordpress Plugin