ಸತತ ಐದನೇ ಬಾರಿ ಮಂಗಳೂರು ವಿವಿ ಚಾಂಪಿಯನ್

• ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಪುರುಷರ ಕ್ರಾಸ್‍ಕಂಟ್ರಿ ಕೂಟ
• ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಯೋಜನೆ
ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಪುರುಷರ ಕ್ರಾಸ್‍ಕಂಟ್ರಿ ಕೂಟದಲ್ಲಿ ಸತತ ಐದನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ ಪಟ್ಟ ಮುಡುಗೇರಿಸಿಕೊಂಡಿದೆ. ಮಂಗಳೂರು ವಿವಿ ಪ್ರತಿನಿಧಿಸಿದ ಆರು ಕ್ರೀಡಾಪಟುಗಳು ಕೂಡ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿರುವುದು ವಿಶೇಷ.
ಭಾನುವಾರ ಮುಂಜಾನೆ 7 ಗಂಟೆಗೆ ಮೂಡುಬಿದಿರೆಯ ನಿಶ್ಮಿತಾ ಟವರ್ಸ್ ಬಳಿಯಿಂದ 10 ಕಿ.ಮೀ. ಸ್ಪರ್ಧೆ ಆರಂಭಗೊಂಡು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ, ಮಹಾವೀರ ಕಾಲೇಜು, ಜೈನ್ ಕಾಲೇಜು, ಅಲಂಗಾರ್ ಮಾರ್ಗವಾಗಿ ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಓಟ ಸಮಾಪನಗೊಂಡಿತು.
ಕ್ರೀಡಾಕೂಟಕ್ಕೆ ಹಸಿರು ನೀಶಾನೆ ತೋರಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಐ.ಪಿ.ಎಸ್, ಇಲ್ಲಿ ಸೇರಿರುವ ಯುವ ಕ್ರೀಡಾಪಟುಗಳೇ ದೇಶದ ಭವಿಷ್ಯವನ್ನು ರೂಪಿಸುವವರು ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಆಳ್ವಾಸ್ ಶಿಕ್ಷಣ ಸಂಸ್ಥೆಯಂತಹ ಮಾದರಿ ಶಿಕ್ಷಣ ಸಂಸ್ಥೆಯನ್ನು ಮಂಗಳೂರು ವಿವಿ ಹೊಂದಿರುವುದು ಹೆಮ್ಮೆಯ ವಿಚಾರ. ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಆಳ್ವಾಸ್ ಸಂಸ್ಥೆ ನಾಡಿನಲ್ಲೇ ಪ್ರಸಿದ್ಧಿ ಪಡೆದಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಪೂರ್ಣ ಬೆಂಬಲದೊಂದಿಗೆ ಮಂಗಳೂರು ವಿವಿಯು ಅಖಿಲ ಭಾರತೀಯ ಮಟ್ಟದ ಕ್ರಾಸ್‍ಕಂಟ್ರಿ ಕ್ರೀಡಾಕೂಟವನ್ನು ಮೂರನೇ ಬಾರಿಗೆ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದೆ ಎಂದರು.
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ. ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ, ಅಂತಾರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ, ಹಿರಿಯ ತರಬೇತುದಾರ ಹರ್ಪಾಲ್ ಸಿಂಗ್ ಮತ್ತು ಸಮಾಜ ಸೇವಕ ಪ್ರಸಾದ್ ರೈ ಉಪಸ್ಥಿತರಿದ್ದರು.
ಮಂಗಳೂರು ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸ್ವಾಗತಿಸಿ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ವಂದಿಸಿದರು. ದೈಹಿಕ ನಿರ್ದೇಶಕ ಪ್ರವೀಣ್ ವಿಜೇತರ ಪಟ್ಟಿ ವಾಚಿಸಿದರು, ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.

—ಬಾಕ್ಸ್—
ಮುಂದುವರಿದ ಮಾದರಿ ಕಾರ್ಯ
ಕ್ರೀಡಾಕೂಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಮಾದರಿ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಆಳ್ವ ಈ ಬಾರಿಯೂ ಮುಂದುವರಿಸಿದ್ದಾರೆ. ಕಳೆದ ವರ್ಷ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ್ದ 79ನೇ ಅಖಿಲ ಭಾರತೀಯ ಅಂತರ್ ವಿವಿ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನಗದು ಬಹುಮಾನ ನೀಡಿ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದರು.

—ಬಾಕ್ಸ್—-
50 ಸಾವಿರ ನಗದು ಬಹುಮಾನ
ಚಾಂಪಿಯನ್ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 50 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗಿದೆ. ವೈಯುಕ್ತಿಕ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರು ವಿವಿಯ ನರೇಂದ್ರ ಪ್ರತಾಪ್ (31.52 ನಿ.)ಗೆ ರೂ. 25 ಸಾವಿರ, ದ್ವಿತೀಯ ಸ್ಥಾನ ಪಡೆದ ಪಂಜಾಬ್ ಯುನಿವರ್ಸಿಟಿಯ ಪಟಿಯಾಲದ ಪಿಂಟು ಕುಮಾರ್ ಯಾದವ್(32.13 ನಿ)ಗೆ 20 ಸಾವಿರ, ತೃತೀಯ ಸ್ಥಾನಿ ಮದ್ರಾಸ್ ವಿವಿಯ ಸತೀಶ್ ಕುಮಾರ್ ಎಸ್.ಎಚ್.(32.22 ನಿ)ಗೆ 15 ಸಾವಿರ. ನಾಲ್ಕನೇ ಸ್ಥಾನ ಪಡೆದ ಮಂಗಳೂರು ವಿವಿಯ ಅಬ್ದುಲ್ ಬಾರಿ(32.30 ನಿ.)ಗೆ 10 ಸಾವಿರ, ಐದನೇ ಸ್ಥಾನ ಪಡೆದ ಕುಮಾನ್ ವಿವಿಂ ನೈನಿತಾಲ್‍ನ ಮೋಹನ್ ಸೈನಿ(32.49 ನಿ.)ಗೆ 5 ಸಾವಿರ, ಆರನೇ ಸ್ಥಾನ ಪಡೆದ ರಾಜೀವ್ ಗಾಂಧಿ ವಿವಿಯ ರೋಹಿತ್ ಯಾದವ್(32.58)ಗೆ 5 ಸಾವಿರ ನಗದು ಬಹುಮಾನ ನೀಡಲಾಯಿತು.
ಬಾಕ್ಸ್—-
ಕೂಟದ ವಿಶೇಷಗಳು
• ದೇಶದ 175 ವಿಶ್ವವಿದ್ಯಾಲಯಗಳ 1500 ಕ್ರೀಡಾಪಟುಗಳು ಭಾಗಿ
• ಕೂಟದಲ್ಲಿ ಸ್ಥಾನ ನಿರ್ಣಯ ಹಾಗೂ ಸಮಯ ಪಾಲನೆಗೆ ಆಟೋಮೈಸಡ್ ಟ್ರಾನ್ಸ್‍ಫಾಂಡರ್ ಹಾಗೂ ಡಿಜಿಟಲ್ ಟೈಮರ್ ಬಳಕೆ
• ಅಥ್ಲೀಟ್‍ಗಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಮೂಲಕ ಸಕಲ ಸಂಚಾರಿ ನಿಯಂತ್ರಣ ವ್ಯವಸ್ಥೆ
• ಸ್ವಚ್ಛತೆ ಕಾಪಾಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದಲೇ ಸ್ವಯಂಸೇವಕರ ನೇಮಕ

ಬಾಕ್ಸ್
ಟೀಮ್ ಚಾಂಪಿಯನ್ ವಿವರ
• ಮಂಗಳೂರು ವಿವಿ 30 ಅಂಕಗಳೊಂದಿಗೆ ಪ್ರಥಮ ಸ್ಥಾನ
• ಪಂಜಾಬಿ ವಿವಿ ಪಟಿಯಾಲ 53 ಅಂಕಗಳೊಂದಿಗೆ ದ್ವಿತೀಯ ಸ್ಥಾನ
• ಸಾವಿತ್ರಿಬಾಯಿಪುಲೆ, ಪುಣೆ ಯುನಿವರ್ಸಿಟಿ 62 ಅಂಕಗಳೊಂದಿಗೆ ತೃತೀಯ ಸ್ಥಾನ
• ಸಂತಬಾಬಾ ಬಾಗ್ ಸಿಂಗ್ ವಿವಿ 85 ಅಂಕಗಳೊಂದಿಗೆ ನಾಲ್ಕನೇ ಸ್ಥಾನ
• ಮಹರ್ಷಿ ದಯಾನಂದ ವಿವಿ 136 ಅಂಕಗಳೊಂದಿಗೆ ಐದನೇ ಸ್ಥಾನ

Highslide for Wordpress Plugin