ವಿದ್ಯಾಗಿರಿ: ದಿನದಿಂದ ದಿನೇ ಬೆಳವಣಿಗೆಯತ್ತ ಸಾಗುತ್ತಿರುವ ಜಗತ್ತಿನಲ್ಲಿ ರಕ್ಷಣೆಯೆಂಬುದು ಮಾಯವಾಗುತ್ತಿದೆ. ಅದು ಕೇವಲ ಹೆಣ್ಣಿನ ರಕ್ಷಣೆ ಮಾತ್ರವಲ್ಲ, ಮಕ್ಕಳ ರಕ್ಷಣೆ, ಪರಿಸರರಕ್ಷಣೆ, ದೇಶದ ರಕ್ಷಣೆ ಹೀಗೆ ಎಲ್ಲಾ ವಿಭಾಗದಲ್ಲೂ ರಕ್ಷಣೆಯ ಕೊರತೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಆಳ್ವಾಳ್ ಪದವಿ ಕಾಲೇಜಿ ಪ್ರಾಂಶುಪಾಲ ಕುರಿಯನ್ ತಿಳಿಸಿದರು.
ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗವು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಆಯೋಜಿಸಿದ್ದ ‘ಬೇಟಿ ಬಚವೋ ಬೇಟಿ ಪಡಾವೋ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗು ಜನ್ಮತಾಳುವ ಮುನ್ನ ಹೆಣ್ಣೋ ಗಂಡೋ ಎನ್ನುವ ಕುತೂಹಲ ಸಹಜ. ಆದರೆ ಆ ಜೀವವನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಇದು ಕೇವಲ ಭಾವನಾತ್ಮಕ ಪರಿಸರ, ಶಿಬಿರ ಭಾಷಣ ಸಂದೇಶ ರವಾನೆಗಳಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ನಡುವೆ ಉತ್ತಮ ಪ್ರೋತ್ಸಾಹ ಹಾಗು ಸೂಕ್ತ ವಾತವರಣ ನಿರ್ಮಾಣ ಮಾಡುವುದು ತುಂಬಾ ಮುಖ್ಯ ಎಂದು ಹೇಳಿದರು.
ಮಕ್ಕಳ ಹಕ್ಕು ಮತ್ತು ಸಮಸ್ಯೆಗಳ ಬಗ್ಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸೋನಿಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ ನಿರ್ವಹಣಾ ಅಧಿಕಾರಿ ಅಭಿಜಿತ್ ಕೇಂದ್ರ ಸರಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಪಕಿ ಡಾ ಶರ್ಲಿ.ಟಿ.ಬಾಬು ಸ್ವಾಗತಿಸಿ, ರೇಖಾ ವಂದಿಸಿ, ನಮೃತ ಮತ್ತು ಉಷಾ ನಿರೂಪಿಸಿದರು.