ವಿದ್ಯಾಗಿರಿ: ಅಧ್ಯಾಪಕರನ್ನು ಅವಲಂಭಿತರಾಗದೆ ಪ್ರತಿಯೊಂದು ಪ್ರಶ್ನೆಗೂ ಸ್ವಂತಿಕೆಯ ಉತ್ತರವನ್ನು ಕಂಡುಕೊಂಡು ಮತ್ತು ಗುರುಗಳ ಜೊತೆ ಉತ್ತಮ ಸಂಬಂದ ಇಟ್ಟುಕೊಳ್ಳುವುದು ಉತ್ತಮ ವಿದ್ಯಾರ್ಥಿಯ ಗುಣಲಕ್ಷಣವಾಗಿರುತ್ತದೆ ಎಂದು ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್ ಆಶಾ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಪದವಿಪೂರ್ವ ಕಾಲೇಜು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಜಂಟಿ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಗೆ ಪರೀಕ್ಷಾ ತಯಾರಿ ಮತ್ತು ವೃತ್ತಿ ಶಿಕ್ಷಣ ಮಾರ್ಗದರ್ಶನದ ಕುರಿತು “ದಿಕ್ಸೂಚಿ-2020 ಕಾರ್ಯಗಾರ” ಡಾ| ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆಯಲೂ ಒಳ್ಳೆ ಗುರಿ, ವಿದ್ಯೆ ಹಾಗೂ ಬುದ್ದಿ ಅಗತ್ಯ ಆದರೆ ಹದಿಹರೆಯದ ಮಕ್ಕಳು ಮನಸ್ಸು ಚಂಚಲವಾಗಿರುತ್ತದೆ. ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳುವಲ್ಲಿ ಮಕ್ಕಳು ವಿಫಲರಾಗಿರುತ್ತಾರೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಫಲಪ್ರದವಾಗುತ್ತದೆ ಎಂದರು. ಮಾತ್ರವಲ್ಲದೆ ಪ್ರಸ್ತುತ ಜಗತ್ತಿನಲ್ಲಿ ಪ್ರತಿಭಾವಂತರಿಗಷ್ಟೇ ಅವಕಾಶಗಳು ಲಭಿಸುತ್ತಿದ್ದು ಪ್ರತಿಯೊಬ್ಬರು ತಮ್ಮ ಜೀವನವನ್ನು ರಚನಾ ಮಾದರಿಯಲ್ಲಿ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ ಮೋಹನ ಆಳ್ವಾ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮುಂದಿನ ಓದಿನ ಕುರಿತು ಜಾಗ್ರತರಾಗಿರಬೇಕು. ಮಾತ್ರವಲ್ಲದೇ ಪ್ರತಿಯೊಂದು ವಿಷಯದಲ್ಲೂ ಬದ್ದತೆ ಇದ್ದಾಗ ಮಾತ್ರ ಸಾಧಿಸಲೂ ಸಾಧ್ಯ. ಅಲ್ಲದೇ ಮುಂದಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಕ್ಷೇತ್ರ ನೂರು ಶೇಕಡಾ ಫಲಿತಾಂಶ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕರು ಮತ್ತು ವೃತ್ತಿ ಮಾರ್ಗದರ್ಶನ ತರಬೇತಿದಾರರಾದ ವೃಷಭರಾಜ್ ಜೈನ್ ಅವರು ಪರೀಕ್ಷಾ ಪೂರ್ವ ತಯರಿ ಮತ್ತು ನೆನಪು ಶಕ್ತಿ ಸಂವರ್ಧನೆಯ ಕುರಿತು ಮಾತನಾಡಿ, ಪರೀಕ್ಷೆಗೆ ಭೌತಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿ ತಯಾರಾಗಬೇಕು. ಜೀವದಲ್ಲಿ ಸ್ಪಷ್ಟವಾದ ಗುರಿ ಇಲ್ಲದೇ ಇರುವಾಗ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಆಸಕ್ತಿಯ ಕೊರತೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ನಿರ್ದಿಷ್ಟ ಗುರಿಯನ್ನು ಹೊಂದಿ ತನ್ನಿಂದ ಆ ಗುರಿಯನ್ನು ತಲುಪಲು ಸಾಧ್ಯ ಎಂದು ಪ್ರತಿಬಾರಿಯು ಚಿಂತಿಸಿದಾಗ ಸಾಧನೆ ಸಾಧ್ಯ ಎಂದರು. ಪಾಠವನ್ನು ಚಿತ್ರವನ್ನಾಗಿ ಪರಿವರ್ತಿಸಿ ನಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಂಡಾಗ ಮಾತ್ರ ಅದು ದೀರ್ಘಕಾಲೀನ ನೆನಪಾಗಿ ಉಳಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದ ಇನ್ನೊರ್ವ ಸಂಪನ್ಮೂಲ ವ್ಯಕ್ತಿ ರಾಷ್ಟ್ರಮಟ್ಟದ ಜೆಸಿ ತರಬೇತುದಾರರಾದ ಜೆಸಿ ರಾಜೇಂದ್ರ ಭಟ್ ಮಾತನಾಡಿ ವಿದ್ಯಾರ್ಥಿಗಳು ಮೊದಲು ಗುರುಗಳನ್ನು ಪ್ರೀತಿಸಲು ಕಲಿಯಬೇಕು ಆಗ ವಿಷಯದ ಬಗ್ಗೆ ತಾನಾಗಿಯೇ ಉತ್ಸಾಹ ಮೂಡುತ್ತದೆ. ಪರೀಕ್ಷೆಗಳನ್ನು ತಾಂತ್ರಿಕವಾಗಿ ಮಾತ್ರವಲ್ಲದೇ ಭಾವನಾತ್ಮಕವಾಗಿ ಓದಬೇಕು. ಆಗ ವಿಷಯಗಳು ನೆನಪಿನಲ್ಲಿ ಉಳಿಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಅಧ್ಯಯನ ತಂತ್ರ ಮತ್ತು ವೃತ್ತಿ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಶೆಟ್ಟಿ ಮತ್ತು ಸಹ ಆಡಳಿತಧಿಕಾರಿ ಅಭಿನಂದನ್ ಶೆಟ್ಟಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ಡಾ| ಉದಯ ಮಂಜುನಾಥ್ ಅಡೇಮನೆ, ಕಾರ್ಯಗಾರದ ನಿರೂಪಣೆಯನ್ನು ರಾಮಚಂದ್ರ ಕಾಂಚೋಡ್, ಟಿ.ಎನ್ ಖಂಡಿಗೆ, ಸುಧಾರಾಣಿ ನಿರ್ವಹಿಸಿದರು.
• ಕಾರ್ಯಗಾರಕ್ಕೆ ಮೂಡುಬಿದಿರೆ ವಲಯದ 21 ಶಾಲೆಗಳಿಂದ 916 ವಿದ್ಯಾರ್ಥಿಗಳು ಪಾಲ್ಗೊಂಡರು
• ತರಗತಿಯಲ್ಲಿ ಸರಿಯಾಗಿ ಆಲಿಸುವುದು ಮತ್ತು ಗಮನಿಸುವುದು ಮೂರು ಸಲ ಓದುವುದಕ್ಕೆ ಸಮ.
• ಪರೀಕ್ಷೆಯ ಬಗ್ಗೆ ಸ್ವಲ್ಪ ಮಟ್ಟಿನ ಭಯ ಆರೋಗ್ಯ ಪೂರ್ಣ ಪ್ರೋತ್ಸಾಹ.
• ನೋ ಗೋಲ್ ಆಂಡ್ ಲೋ ಗೋಲ್ ಲೀಡ್ಸ ಟು ಲೆಝಿನೆಸ್
• ನಿಮ್ಮ ಯೋಚನೆ ಮತ್ತು ನಂಬಿಕೆಗೆ ಅನುಗುಣವಾಗಿ ದೇಹ ಸ್ಪಂದಿಸುತ್ತದೆ.
• ಸೀ ಇಟ್, ಸೆ ಇಟ್, ಫೀಲ್ ಇಟ್, ಸ್ಮೆಲ್ ಇಟ್, ಟೇಸ್ಟ್ ಇಟ್ ಆಂಡ್ ರಿಪೀಟ್ ಇಟ್ ಇದು ಯಶಸ್ವಿ ವಿದ್ಯಾರ್ಥಿ ಮಂತ್ರ.
• ಗಣಿತ ಮತ್ತು ವಿಜ್ಞಾನ ವಿಷಯಗಳು ಅನ್ನದ ಬಟ್ಟಲು.
• ನಾನು ಸೋಲುತ್ತೇನೆ ಎಂಬ ಅತಿಯದ ಭಯ ಹಾಗು ಆತ್ಮ ವಿಶ್ವಾಸದ ಕೊರತೆ ಇಂದಿನ ವಿದ್ಯಾರ್ಥಿಗಳ ಸಮಸ್ಯೆ.
• ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ