ವಿದ್ಯಾಗಿರಿ: ಪ್ರಸ್ತುತ ದಿನಗಳಲ್ಲಿ ಸೂಕ್ಷ್ಮಜೀವಶಾಸ್ತ್ರವೆಂಬುದು ಅತೀ ಪ್ರಾಮುಖ್ಯತೆಯನ್ನು ಹೊಂದಿರುವ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಲಭ್ಯವಿರುವ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಡಾ. ಭಾರತಿ ಪ್ರಕಾಶ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನಲ್ಲಿ ಸೂಕ್ಷ್ಮಜೀವವಿಜ್ಞಾನ ವಿಭಾಗದ ವತಿಯಿಂದ ನಡೆದ ಒಂದು ದಿನದ ಮಾಹಿತಿ ಕಾರ್ಯಗಾರ ʻಮೈಕ್ರೊಸ್ಪಾರ್ಕ್ʻನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಶೋಧನಾ ಮನೋಭಾವವೆಂಬುದು ವಿಜ್ಞಾನಿಯಾಗಬಯಸುವವನಿಗೆ ಅತೀಮುಖ್ಯ ಅಂಶ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಆಕ್ತಿದಾಯಕ ಕ್ಷೇತ್ರದಲ್ಲಿ ಸಂಶೋಧನಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿನ ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವನೆಯ ಕೊರತೆಯಿದ್ದು, ಅದರ ಫಲವಾಗಿ ವಿಜ್ಞಾನಲೋಕದಲ್ಲಿ ಅನ್ಯದೇಶಗಳ ವಿಜ್ಞಾನಿಗಳ ಹೆಸರುಗಳೇ ರಾರಾಜಿಸುತ್ತಿವೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಈ ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ದೇಶ ಹೆಮ್ಮೆ ಪಡುವ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಜ್ಞಾನಿಯ ಲಕ್ಷಣವಿದ್ದು, ಉತ್ತಮ ಯೋಚನಾ ಶಕ್ತಿ ಹಾಗೂ, ಸಮಸ್ಯೆಗಳನ್ನು ಕುರಿತು ಪ್ರಶ್ನಿಸುವ ಸಾಮಥ್ರ್ಯವಿದ್ದಾಗ ಒಬ್ಬ ಮಾದರಿ ವಿಜ್ಞಾನಿ ಹೊರಬರಬಲ್ಲ. ಮಾತ್ರವಲ್ಲ ಪ್ರಸಕ್ತ ಕಾಲದಲ್ಲಿ ವಿಜ್ಞಾನವೆಂದರೆ ಕೇವಲ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಗಳೆಂಬ ಮನೋಭಾವವಿದ್ದು, ಆ ಸಂಕುಚಿತ ಭಾವನೆಯಿಂದ ಹೊರಬಂದು, ವಿಶಾಲ ದೃಷ್ಟಿಕೋನದಿಂದ ಚಿಂತಿನೆ ನಡೆಸಿ, ಜೀವನವನ್ನು ಸಫಲಗೊಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾದ ರಮ್ಯ ರೈ, ವಿದ್ಯಾರ್ಥಿ ಸಂಯೋಜಕರು, ಉಪನ್ಯಾಸಕರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕಣ್ಮನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್:
ಇದೇ ಸಂಧರ್ಭದಲ್ಲಿ ಸೂಕ್ಷ್ಮ ಜೀವವಿಜ್ಞಾನದ ಕುರಿತು ವಿದ್ಯಾರ್ಥಿಗಳು ರಚಿಸಿದ ʻಮೈಕ್ರೊಬಯಲ್ ಔಟ್ಲುಕ್ʻ ಎಂಬ ನಿಯತಾಲಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜೊತೆಗೆ ವಿಭಾದಗ ವತಿಯಿಂದ ನಡೆಸಿದ ʻ ಚಾರ್ಟ್ ಮೇಕಿಂಗ್ ʻ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ವೀಕ್ಷಣೆಯ ಜೊತೆಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.