ಮೂಡಬಿದಿರೆ: ಪ್ರತಿಯೊಬ್ಬರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರಿಂದ ಆಳ್ವಾಸ್ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯಿಂದ ಉತ್ತಮ ದರ್ಜೆಯ ಫಲಿತಾಂಶ ಲಭಿಸಿತು ಎಂದು ಆಳ್ವಾಸ್ ಕಾಲೇಜಿನ ಮಾಜಿ ನ್ಯಾಕ್ ಸಂಯೋಜಕಿ ಹಾಗೂ ಜೈಪುರ ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಕಮ್ಯೂನಿಕೇಷನ್ನ ಹಿರಿಯ ಸಹಾಯಕ ಪ್ರಾಧ್ಯಾಪಕಿ ಡಾ ಮೌಲ್ಯ ತಿಳಿಸಿದರು.
ಅವರು ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ‘’ಅಭಿವಂದನಾ ಸಮಾರಂಭ’’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಳ್ವಾಸ್ ಕಾಲೇಜು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಪ್ರಕ್ರಿಯೆಯಲ್ಲಿ ಪೂರ್ವಸಿದ್ದತೆಯನ್ನು ಮಾಡಿಕೊಂಡ ರೀತಿಯನ್ನು ವಿವರಿಸಿದರು. ಕಾಲೇಜಿನ ಆಡಳಿತ ಮಂಡಳಿ,ವಿವಿಧ ಕ್ರೈಟೀರಿಯಾಗಳ ಮುಖ್ಯಸ್ಥರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಪಾಲಕರ ಸಹಕಾರವನ್ನು ಈ ಸಮಯದಲ್ಲಿ ಸ್ಮರಿಸಿದರು. ಮುಂದಿನದಿನಗಳಲ್ಲಿ ಕಾಲೇಜು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯ ಶಿಫಾರಸ್ಸುಗಳ ಮೇಲೆ ಹೇಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥರಾಗಿರುವ ಡಾ ಎಂ ಮೋಹನ್ ಆಳ್ವರ ಆಸ್ಥೆಯಂತೆ, ಸಾಂಸ್ಕøತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದ ಅಗ್ರಮಾನ್ಯ ಸಾಧನೆಯಿಂದ ನಮ್ಮ ಕಾಲೇಜು ಬೇರೆ ಕಾಲೇಜುಗಳಿಂದ ಅನನ್ಯವಾಗಿ, ನಾಡಿನೆಲ್ಲಡೆ ಚಿರಪರಿಚಿತವಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಲೇಜುವಹಿಸುತ್ತಿರುವ ಕಾಳಜಿಯಿಂದ ಸಿಜಿಪಿಎ 3.23ಯೊಂದಿಗೆ ‘’ಎ ಗ್ರೇಡ್’’ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಈ ಸಾಧನೆಯಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿ ಕೊಂಡಿದ್ದರಿಂದ, ಈ ಫಲಿತಾಂಶ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಶಿಕ್ಷಕರು ಸಂಶೋಧನಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಂಡು ತಮ್ಮ ಉನ್ನತಿಯ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಬೆಳಗಬೇಕು ಎಂದರು.
ಸಭಾ ಕಾರ್ಯಮದ ಬಳಿಕ ಕಾಲೇಜಿನ ಸಿಬ್ಬಂದಿಗಳಿಗೆ ಶುಚಿರುಚಿಯಾದ ಬೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮವನ್ನು ಆಳ್ವಾಸ್ ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ ರಶ್ಮಿ ನಿರ್ವಹಿಸಿ, ಉಪನ್ಯಾಸಕಿ ಶ್ರೇಯಾ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕಿ ಡಾ ಶ್ರುತಿ ನ್ಯಾಕ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ ವ್ಯಕಿಗಳ ಪಟ್ಟಿಯನ್ನು ವಾಚಿಸಿ, ಐಕ್ಯೂಎಸಿ ಸಂಯೋಜಕ ಕ್ಯಾಪ್ಟನ್ ಡಾ ರಾಜೇಶ್ ವಂದಿಸಿದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿಗಳಾದ ಪ್ರೋ ಬಾಲಕೃಷ್ಣ ಶೆಟ್ಟಿ, ಅಭಿನಂದನ್ ಶೆಟ್ಟ, ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.