ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ಕುರಿತು ಮಾಹಿತಿ ಕಾರ್ಯಗಾರವನ್ನು ಆಳ್ವಾಸ್ ಆಂತರಿಕ ದೂರು ಸಮಿತಿಯು ಆಯೋಜಿಸಲಾಗಿತ್ತು. ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್‍ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಕಾರ್ತಿಕ್.ಎಸ್.ಕಟೀಲ್ ಹಾಗೂ ಅವರ ತಾಯಿ ಶೋಭಲತಾ ವಿದ್ಯಾರ್ಥಿನಿಯರಿಗೆ ಯಾವ ರೀತಿಯಾಗಿ ಕಿರುಕುಳದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರ ನೀಡಿದರು.
ಒಬ್ಬ ಸ್ವಯಂ ರಕ್ಷಣೆಯನ್ನು ಕಲಿತ ಮಹಿಳೆ ಅನೇಕ ರೀತಿಯಲ್ಲಿ ತನ್ನನ್ನು ತಾನು ಕಿರುಕುಳದಿಂದ ಪಾರಗಿಸಬಹುದು. ಮೊದಲಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಅರಿವು ಅತ್ಯಗತ್ಯ ಆಗ ಮಾತ್ರ ನಾವು ಪ್ರತಿಕ್ರಿಯಿಸಲು ಸಾಧ್ಯ. ಭಾರತದಲ್ಲಿ ಶೇಕಡ 94.8 ರಷ್ಟು ಕಿರುಕುಳ ಮನೆ ಮತ್ತು ಸಂಬಂಧಿಕರಿಂದ ಆಗುತ್ತಿದೆ ಎನ್ನುವುದು ವಿಷಾದದ ಸಂಗತಿ. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮುಖೇನ ಆಹ್ವಾನಿಸುತ್ತಿದ್ದು ಅದಕ್ಕೆ ಕಡಿವಾಣ ಹಾಕಿದರೆ ಮಾತ್ರ ಕಿರುಕುಳಗಳಿಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗಲು ಸಾಧ್ಯ.
ನಮಗೆ ಅಪಾಯ ಮಾಡಲು ಬರುವ ವ್ಯಕ್ತಿಯ ದೇಹದಲ್ಲಿ ಮೊದಲಿಗೆ ಸಿಗುವ ಸೂಕ್ಷ್ಮ ಭಾಗವೆಂದರೆ ಕಣ್ಣು, ಮೂಗು ಹಾಗೂ ಗಂಟಲೂ, ಅವರ ಆ ಭಾಗಗಳಿಗೆ ದಾಳಿ ಮಾಡುವುದರಿಂದ ನಮ್ಮನ್ನು ನಾವು ಕಿರುಕುಳದಿಂದ ರಕ್ಷಣೆ ಮಾಡಬಹುದು ಎಂದು ತಿಳಿಸಿದರು. ಅಲ್ಲದೇ ನಮ್ಮನ್ನು ನಾವು ರಕ್ಷಣೆ ಮಾಡುವ ಬರದಲ್ಲಿ ನಾವು ಮಾಡುವ ತಪ್ಪುಗಳು ಹೇಗೆ ನಮ್ಮನ್ನು ಸಂಕಷ್ಟಕ್ಕೆ ಎಡೆಮಾಡಿಕೊಡುತ್ತದೆ ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೋ. ರಮೇಶ್ ಶೆಟ್ಟಿ, ಆಡಳಿತ ಅಧಿಕಾರಿ ಅಭಿನಂದನ್ ಶೆಟ್ಟಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.