ಆಳ್ವಾಸ್‍ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಮೂಡಬಿದಿರೆ: ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಪಕ ಡಾ ಯೋಗೀಶ್ ಕೈರೋಡಿ ನುಡಿದರು.
ಅವರು ಆಳ್ವಾಸ್ ಪದವಿ ಕಾಲೇಜಿನ ಐಕ್ಯೂಎಸಿವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್ ಸಮಸ್ಯೆಯ ಭಾಗವಾಗಿ, ಕಷ್ಟಕಾರ್ಪಣ್ಯಗಳನ್ನು ಎದುರಿಸಿದ್ದರಿಂದಾಗಿ ಸಮಾಜದಲ್ಲಿನ ಶೋಷಿತರ ಭವಣೆಯನ್ನು ಅರಿಯಲು ಸಾಧ್ಯವಾಯಿತು. ಅಂತಹ ಶೋಷಿತರಿಗೆ ಸಮಾಜದಲ್ಲಿ ಗೌರಯುತವಾಗಿ ಬದುಕುವ ಪರಿಸ್ಥಿತಿಯನ್ನು ತರಲು ಪ್ರೇರೆಪಿಸಿತು.
ಇಂದು ನಮ್ಮ ಮತಿಯ ಹಿಂದೆ ಒಂದೊಂದು ಮತದ ಪ್ರಭಾವ ದಟ್ಟವಾಗಿ ಬೀರಿ, ಎಲ್ಲವನ್ನು ಹಾಗೂ ಎಲ್ಲರನ್ನು ಸಂಶಯದಿಂದ ದೃಷ್ಟಿಯಿಂದ ನೋಡುವ ಪರಿಸ್ಥಿತಿಗೆ ಬಂದಿದ್ದೆವೆ. ಹಿಂದಿನ ಕಾಲದಲ್ಲಿ ವ್ಯಕ್ತಿಗಳ ನಡುವೆ ಭೌತಿಕ ಅಂತರವಿದ್ದರೂ, ಮಾನಸಿಕವಾಗಿ ಅವರು ಆಪ್ತರಾಗಿದ್ದರು. ಆದರೆ ಇಂದು ನಾವು ಭೌತಿಕ ಸಾಮೀಪ್ಯ ಬೆಳಸಿಕೊಂಡಿದ್ದರೂ, ಮಾನಸಿಕವಾಗಿ ಸಾಕಷ್ಟು ಅಂತರವನ್ನು ಹಾಕಿ ಕೊಂಡಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಸಮಾಜದಲ್ಲಿ ಒಂದಿಬ್ಬರ ಮನಸ್ಥಿತಿ ಬದಲಾದರೆ ಇಡೀ ಸಮಾಜ ಬದಲಾವಣೆಯನ್ನು ಹೊಂದಲು ಸಾಧ್ಯವಿಲ್ಲ, ಇಡೀ ಸಮುದಾಯವೇ ಬದಲಾವಣೆಯತ್ತಾ ಹೆಜ್ಜೆ ಹಾಕಿದರೆ ಸರ್ವರ ಏಳಿಗೆ ಖಂಡಿತ ಸಾಧ್ಯ. ಆ ಹಿನ್ನಲೆಯಲ್ಲಿ ಅಂಬೇಡ್ಕರ್‍ರವರ ಚಿಂತನೆ ಸದಾ ನಮಗೆಲ್ಲರಿಗೂ ಉತ್ತಮ ಮಾರ್ಗದರ್ಶಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್, ಅಸ್ಪ್ರಶ್ಯತೆಯ ಭಾವನೆ ಮೊದಲು ನಮ್ಮ ಮನಸ್ಸಿನಿಂದ ತೊಲಗಬೇಕು. ನಮ್ಮ ಮನಸ್ಸಿನೊಳಗೆ ಅಸ್ಪ್ರಶ್ಯರು ಎಂದು ಇದ್ದ ವರ್ಗ, ಈಗಲೂ ಅದೇ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದೆ. ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ, ವೇಸ್ಟ್ ಮ್ಯಾನೇಜ್ಮೇಂಟ್ ಸಿಸ್ಟಮ್‍ನಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಮನುಷ್ಯರೆ ಮ್ಯಾನ್ ಹೋಲ್‍ಗಳಿಗೆ ಇಳಿಯುವ ಪರಿಸ್ಥಿತಿ ಇಗಲೂ ಚಾಲ್ತಿಯಲ್ಲಿದೆ ಎಂದು ದುಃಖ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ರಾಮ್ ಭಟ್, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನರಾಮ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Highslide for Wordpress Plugin