ವಿದ್ಯಾಗಿರಿ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಒಂದೇ ವಿಷಯಕ್ಕೆ ಸೀಮಿತಗೊಂಡಿದ್ದು, ಅದು ಅವರಲ್ಲಿನ ಕೌಶಲ್ಯಗಳ ಅಭಿವೃದ್ದಿಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗಗೆ ಅವಶ್ಯಕವಾದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಅವರು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆದ ‘ಫ್ರೆಶರ್ಸ್ ಡೇ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
`ಜೀವನದಲ್ಲಿ ಜ್ಞಾನ ಸಂಪಾದನೆ ಮುಖ್ಯವೇ ಹೊರತು, ಯಾವುದೇ ಪ್ರಮಾಣ ಪತ್ರಗಳಲ್ಲ. ಆದ್ದರಿಂದ ವಿದ್ಯಾರ್ಥಿಗಳು ನಿರ್ದಿಷ್ಟ ಚೌಕಟ್ಟಿನಿಂದ ಹೊರಬಂದು, ಮುಕ್ತಮನಸ್ಸಿನಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಾತ್ರವಲ್ಲ ಪ್ರತಿಯೊಂದು ವಿಚಾರಕ್ಕೂ ಶಿಕ್ಷಕರನ್ನು ಅವಲಂಬಿಸದೇ, ತಮ್ಮ ಉಜ್ವಲ ಭವಿಷ್ಯಕ್ಕೆ ಅಗತ್ಯವಿರುವಂತಹ ನಿರ್ಧಾರ ತೆಗೆದುಕೊಂಡು, ಆ ಗುರಿ ಮುಟ್ಟುವಲ್ಲಿ ಪ್ರಯತ್ನ ನಡೆಸಬೇಕು’ ಎಂದರು.
ಆಳ್ವಾಸ್ ಸ್ಕೂಲ್ ಆಫ್ ಅಡ್ವಾನ್ಸಡ್ ಸಂಯೋಜಕರಾದ ಫಾದರ್ ವಿಲಿಯಂ ಡಿಸಿಲ್ವಾ ಮಾತನಾಡಿ, `ಜೀವನದಲ್ಲಿ ಪರಸ್ಪರರ ಸಹಕಾರ ಹಾಗೂ ಮಾಹಿತಿ ವಿನಿಮಯದಿಂದಾಗಿ ಎನನ್ನಾದರು ಸಾಧಿಬಹುದೇ ಹೊರತು ಏಕಾಂಗಿಯಾಗಿ ಎನನ್ನೂ ಸಾಧಿಸಲು ಸಾಧ್ಯವಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆಯ ಹಳೆಯ ಪಠ್ಯಕ್ರಮಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಸಂಕುಚಿತ ಯೋಚನಾ ಮನೋಭಾವನೆಯನ್ನು ಮೂಡಿಸುತ್ತಿದ್ದು. ಇದು ವಿದ್ಯಾರ್ಥಿಗಳಲ್ಲಿ ವಿಶಾಲ ಮನೋಭಾವನೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಆದ್ದರಿಂದ ಪ್ರಸಕ್ತ ದಿನಗಳಿಗೆ ಅನ್ವಯವಾಗುವಂತಹ ಪಠ್ಯಕ್ರಮವನ್ನು ಅನುಷ್ಠಾನಗೊಳಿಸಿದಾಗ ವಿದ್ಯಾರ್ಥಿಗಳ ಕೌಶಾಲ್ಯಾಭಿವೃದ್ದಿ ಸಾಧ್ಯ’ ಎಂದು ತಿಳಿಸಿದರು.