ಆಳ್ವಾಸ್‍ನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳ ಶಿಕ್ಷಕ ರಕ್ಷಕ ಸಭೆ

ಮೂಡಬಿದಿರೆ: “ಮಕ್ಕಳು ಎಷ್ಟೇ ದೊಡ್ಡವರಾದರು, ಅವರ ಪ್ರತಿಯೊಂದು ಚಲನವಲನಗಳ ಬಗ್ಗೆ ಗಮನ ನೀಡಬೇಕಾದ್ದು ಪಾಲಕರು ಜವಬ್ದಾರಿ ಮತ್ತು ಇದನ್ನು ಅವರು ತಪ್ಪದೇ ಪಾಲಿಸಬೇಕು” ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನ ಪುಟ್ಟಣ್ಣ ಕಣಗಾಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2019ನೇ ಸಾಲಿನ ಶಿಕ್ಷಕ-ರಕ್ಷಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
“ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯವಾದದ್ದು. ಅವರು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿ, ಅವರ ಆಸಕ್ತಿ ಕ್ಷೇತ್ರದಲ್ಲಿ ಮುನ್ನಡೆಯುವಂತೆ ಪಾಲಕರು ಪ್ರೇರೇಪಿಸಬೇಕು. ಅದರ ಜತೆಗೆ ಅವರ ತಪ್ಪುಗಳನ್ನು ಖಂಡಿಸಿ, ತಿದ್ದಿ ಬುದ್ಧಿ ಹೇಳುವ ಕಾರ್ಯವೂ ಪಾಲಕರಿಂದ ಆಗಬೇಕು. ಹೀಗಾದಾಗ ಮಾತ್ರ ಮಕ್ಕಳು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ” ಎಂದು ಪ್ರತಿಪಾದಿಸಿದರು.
ಖ್ಯಾತ ಅಲ್ಲ ಒಳ್ಳೆಯ ಪತ್ರಕರ್ತರಾಗಿ..
“ಇಂದಿನ ಪತ್ರಿಕೋದ್ಯಮ ಕ್ಷೇತ್ರವನ್ನು ಗಮನಿಸಿದಾಗ, ಅದು ಸಂಪೂರ್ಣವಾಗಿ ವ್ಯಾಪಾರವಾಗಿ ಮಾರ್ಪಟ್ಟಿರುವುದನ್ನು ನಾವು ಕಾಣಬಹುದು. ಸದ್ಯ ಪತ್ರಿಕೋದ್ಯಮಕ್ಕೆ ಮುಖ್ಯವಾಗಿರುವುದು ಎರಡೇ ಅಂಶ. ಒಂದು ಹಣ, ಮತ್ತೊಂದು ಯಾವ ರೀತಿಯಿಂದಲಾದರೂ ಸರಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ಇದಕ್ಕಾಗಿ ಪತ್ರಕರ್ತರು ಸಾಮಾಜಿಕ ಕಳಕಳಿ ಹಾಗೂ ನೈತಿಕತೆಯನ್ನು ಮೂಲೆಗುಂಪು ಮಾಡಿದ್ದಾರೆ. ಆದರೆ ಭಾವಿ ಪತ್ರಕರ್ತರಾಗುವೆಡೆ ಹೆಜ್ಜೆ ಇಡುತ್ತಿರುವ ನೀವು ಸತ್ಯ ಪರವಾಗಿ ಕಾರ್ಯ ನಿರ್ವಹಿಸುವ ಹಾಗೂ ಉತ್ತಮ ಸಮಾಜ ನಿರ್ಮಿಸುವ ಕಡೆಗೆ ಸಾಗಬೇಕಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್‍ರಾಮ್ ಆಗಮಿಸಿದ್ದ ಪೋಷಕರನ್ನು ಸ್ವಾಗತಿಸಿ, ವಿಭಾಗದ ಕಳೆದ ಸಾಲಿನ ಕಾರ್ಯಚಟುವಟಿಕೆ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಪತ್ರಿಕೋದ್ಯಮ ವಿಭಾಗ ಬೆಳೆದ ರೀತಿಯ ಬಗ್ಗೆ ತಯಾರಿಸಲಾದ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು.
ಹೊರರಾಜ್ಯ ಹಾಗೂ ಕರ್ನಾಟಕದ ವಿವಿಧ ಸ್ಥಳಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಪಾಲಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅವರಿಗಾಗಿ `ಮ್ಯೂಸಿಕಲ್ ಚೇರ್’ ಹಾಗೂ `ಲೆಮೆನ್ ಆ್ಯಂಡ್ ಸ್ಪೂನ್’ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜತೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಕಿರು ಪ್ರಹಸನ, ನೃತ್ಯ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮದ ಸಂಯೋಜಕಿ ದೇವಿಶ್ರೀ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ನಿವೇದಿತಾ ಭಾಗ್ಯನಾಥನ್, ಸುಮಲತಾ ಬಜಗೋಳಿ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಗೌರಿ ಜೋಶಿ ನಿರೂಪಿಸಿ, ಉಪನ್ಯಾಸಕ ಪ್ರಸಾದ ಶೆಟ್ಟಿ ವಂದಿಸಿದರು.

ಬಾಕ್ಸ್ ಐಟಮ್:
ಆಳ್ವಾಸ್ ಮಕ್ಕಳ ಬೆಳವಣಿಗೆಗೆ ಎಲ್ಲಾ ರೀತಿಯ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಈ ಬಗೆಗೆ ನನಗೆ ಅತೀವವಾದ ಸಂತೋಷವಿದೆ. ಇಂಥ ಸಂಸ್ಥೆಯಲ್ಲಿ ನನ್ನ ಮಗಳು ವ್ಯಾಸಂಗ ಮಾಡುತ್ತಿದ್ದಾಳೆ ಎಂಬುದೇ ನನಗೆ ಖುಷಿಯ ವಿಚಾರ.
-ಕೌಸ್ತುಭ ಭಟ್, ಪಾಲಕರು (ಶೃಂಗೇರಿ)

ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಆರಂಭದಿಂದಲೂ ನನಗೆ ಕೊಂಚ ಅಳುಕಿತ್ತು. ಆದರೆ ಮಗಳ ಅಪೇಕ್ಷೆ ಮೇರೆಗೆ ಅವಳನ್ನು ಆಳ್ವಾಸ್‍ಗೆ ಸೇರಿಸಿದೆ. ಈಗ ಅವಳು, ಈ ಎರಡು ವರ್ಷದಲ್ಲಿ ಅರಿತಿರುವ ವಿಷಯಗಳು ಹಾಗೂ ಬೆಳೆದಿರುವ ರೀತಿಯನ್ನು ನೋಡಿ ನನಗೆ ಬಹಳ ಹೆಮ್ಮೆ ಎನಿಸುತ್ತಿದೆ.
-ಅಜಿತ್, ಪಾಲಕರು (ಕೇರಳ)

Highslide for Wordpress Plugin