ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಸಹಕಾರ ಸಂಘ ನಿಯಮಿತದ ಮೂರನೇ ವಾರ್ಷಿಕ ಮಹಾಸಭೆ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ 1 ಲಕ್ಷ ರೂ. ದೇಣಿಗೆಯನ್ನು ನೀಡಲಾಯಿತು.
ಸಂಘದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಎಂ.ಶೆಟ್ಟಿ ಒಂದು ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಎಂ ಮೋಹನ ಆಳ್ವ, ಆಳ್ವಾಸ್ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 45 ಕೋಟಿ ರೂ. ವ್ಯವಹಾರ ನಡೆಸಿದ್ದು, 63.94 ಲಕ್ಷ ರೂ. ಲಾಭಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಿಸುತ್ತಿದ್ದೇವೆ. ಸಂಘವು ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿರುವುದು ಸಂತಸ ತಂದಿದೆ. ಈಗಾಗಲೇ ಸಂಘದ ಶಾಖೆಯ ಸಂಪೂರ್ಣ ಗಣಕೀಕೃತ ವಿಸ್ತರಣ ಕಚೇರಿಯನ್ನು ಮೂಡುಬಿದಿರೆಯಲ್ಲಿ ತೆರೆಯಲಾಗಿದೆ. ಮುಂದೆ ಮಿಜಾರಿನಲ್ಲಿರುವ ಶೋಭಾವನ ಕ್ಯಾಂಪಸ್‍ನಲ್ಲೂ ವಿಸ್ತರಣಾ ಕಚೇರಿ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ ನಂ.1 ಸ್ಥಾನದಲ್ಲಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಪೂರ್ಣ ಉಚಿತವಾಗಿ ಕಲಿಯುತ್ತಿರುವ 700 ಮಂದಿವಿದ್ಯಾರ್ಥಿಗಳಿದ್ದಾರೆ. ಸಂಘದ ಶಿಕ್ಷಣ ನಿಧಿಯನ್ನು ಶಾಲೆಯ ಏಳಿಗೆಗಾಗಿ ಮೀಸಲಿರಿಸಿದ್ದೇವೆ. ಇದರೊಂದಿಗೆ ಮೂಡುಬಿದಿರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಕೌಟ್ ಗೈಡ್ಸ್ ಕನ್ನಡ ಭವನಕ್ಕೂ ಸಂಘ ನೆರವು ನೀಡಲಿದೆ ಎಂದರು.
ಮಾಜಿ ಸಚಿವ, ಎಂ.ಸಿ.ಎಸ್ ಬ್ಯಾಂಕ್‍ನ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ, ಉಪಾಧ್ಯಕ್ಷ ಎ.ಮೋಹನ್ ಪಡಿವಾಳ್, ನಿರ್ದೇಶಕರಾದ ಶ್ರೀಪತಿ ಭಟ್, ಜಯರಾಮ ಕೋಟ್ಯಾನ್, ರಾಮಚಂದ್ರ ಮಿಜಾರು, ಮೊಹಮ್ಮದ್ ಶರೀಫ್, ಅಶ್ವಿನ್ ಜೊಸ್ಸಿ ಪಿರೇರಾ ಉಪಸ್ಥಿತರಿದ್ದರು.