ವಿದ್ಯಾಗಿರಿ: ನಕಾರಾತ್ಮಕ ವಿಷಯ ಹಾಗೂ ಒತ್ತಡಗಳ ನಡುವೆ ಸಕಾರಾತ್ಮಕ ವಿಚಾರಗಳನ್ನು ಅನ್ವೇಷಿಸಿ ಅವುಗಳ ಕುರಿತಾದ ಲೇಖನಗಳನ್ನು ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರಿಂದ ಪ್ರತಿಯೊಬ್ಬ ಪತ್ರಕರ್ತನೂ ತನ್ನ ಕ್ಷೇತ್ರದಲ್ಲಿ ಸಫಲನಾಗಲು ಸಾಧ್ಯ ಎಂದು ಮಂಗಳೂರಿನ ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರ ಮಹಮ್ಮದ್ ಆರಿಫ್ ಹೇಳಿದರು.
ಅವರು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಸಕಾರಾತ್ಮಕ ಲೇಖನಗಳಿಗೆ ಮಾಧ್ಯಮಗಳಲ್ಲಿ ಅನೇಕ ಅವಕಾಶಗಳಿವೆ ಹಾಗೂ ಅಂತಹ ಲೇಖನಗಳನ್ನು ಪೆÇ್ರೀತ್ಸಹಿಸುವವರು ಅನೇಕರಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಜಾಗೃತ ಮನೋಸ್ಥಿತಿ, ಗ್ರಹಿಕಾ ಸಾಮರ್ಥ್ಯ, ತಾಳ್ಮೆ, ವಸ್ತು ನಿಷ್ಠತೆ, ಸಂವೇದನಾ ಶೀಲತೆ, ಹಾಗೂ ಮಾನವೀಯತೆ ಅತ್ಯಗತ್ಯ. ಆಗ ಸಮಾಜದಲ್ಲಿನ ಪ್ರತಿಯೊಂದು ಒಳ್ಳೆಯ ಕೆಲಸವನ್ನು ಜನರಿಗೆ ತಿಳಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಬಹುದು. ಯಾವುದೇ ಮಾಧ್ಯಮಗಳು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ತಂತ್ರಜ್ಞಾನದ ಜೊತೆಗೆ ಮುನ್ನಡೆಯುವುದು ಅಗತ್ಯ ಎಂದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಪೆಜತ್ತಾಯ ಹಾಗೂ ವಿಭಾಗದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.