ವಿದ್ಯಾಗಿರಿ: ನಾಯಕತ್ವ ಎಂಬುದು ಉತ್ತಮ ಕೌಶಲ್ಯವಾಗಿದ್ದು, ಸ್ವ-ಅಭಿವೃದ್ದಿಯ ಜೊತೆಗೆ, ಇತರರನ್ನು ಸಬಲೀಕರಣವನ್ನಾಗಿಸುವ ಶಕ್ತಿಯುತ ಸಾಧನವಾಗಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರೊ. ಕೃಷ್ಣಮೂರ್ತಿ ಹೇಳಿದರು.
ಅವರು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಮೂರು ದಿನಗಳ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಉತ್ತಮ ನಾಯಕನಾಗುವುದು ಸುಲಭದ ಮಾತಲ್ಲ, ತನ್ನ ವಿಷಯದ ಕುರಿತಾದ ವಿಶೇಷ ಪ್ರೀತಿ, ತಾಳ್ಮೆ, ಹೊಂದಾಣಿಕೆಯ ಮನೋಭಾವ, ಆ ಕಾರ್ಯಕ್ಕೆ ಅಗತ್ಯವಾದ ಬದ್ದತೆ – ಶಿಸ್ತು, ಪ್ರಾಮಾಣಿಕತೆ, ಧನಾತ್ಮಕ ಚಿಂತನೆ ಆತನಲ್ಲಿದ್ದರೆ, ಆತ ಮಾದರಿ ನಾಯಕನಾಗಬಲ್ಲ. ಜೊತೆಗೆ ತಾನು ತೆಗೆದುಕೊಳ್ಳುವ ನಿರ್ಧಾರ, ಕಾರ್ಯವೈಖರಿಯೂ ಕೂಡ ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ನಿರ್ದಿಷ್ಟ ವಿಚಾರದ ಕುರಿತು ಆಸಕ್ತಿ ಬೆಳೆಸಿಕೊಂಡು, ತದನಂತರ ಅದಕ್ಕನುಗುಣವಾದ ಚಟುವಟಿಕೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ವಿಕಿಪಿಡಿಯಾ ಸಂಘದ ಸಂಯೋಜಕರಾದ ಪ್ರೋ ಅಶೋಕ್ ಕೆ ಜಿ. ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಇತರರಿಗಿಂತ ವಿಭಿನ್ನವಾಗಿರಲು ಪ್ರಯತ್ನಿಸಿಬೇಕು. ಇಲ್ಲವಾದಲ್ಲಿ ನಮಗೆ ಯಾವುದೇ ಸ್ಥಾನಮಾನ ದೊರೆಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ನಿರ್ದಿಷ್ಟ ಚೌಕಟ್ಟಿನಿಂದ ಹೊರಬಂದು, ತಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು, ಆ ಕ್ಷೇತ್ರದಲ್ಲಿ ಶ್ರೇಷ್ಟತೆಯನ್ನು ಸಾಧಿಸುವಲ್ಲಿ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಪ್ರಸಾದ್ ಶೆಟ್ಟಿ, ರವಿಚಂದ್ರ, ಸ್ವಾತಿ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕ ಶ್ರೀನಿವಾಸ್ ಎಚ್ ಸ್ವಾಗತಿಸಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಪೆಜತ್ತಾಯ ವಂದಿಸಿ, ಉಪನ್ಯಾಸಕ ಡಾ.ಶ್ರೀನಿವಾಸ್ ಎಚ್ ಕಾರ್ಯಕ್ರಮ ನಿರೂಪಿಸಿದರು.