ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 25 ವರ್ಷಗಳಿಂದ ನಡೆದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಹಾಗೂ 15 ವರ್ಷಗಳಿಂದ ನಡೆದ ಆಳ್ವಾಸ್ ನುಡಿಸಿರಿಯನ್ನು ನ.14ರಿಂದ 17ರವರೆಗೆ ಒಂದೇ ಸಮ್ಮೇಳನವಾಗಿ ಆಳ್ವಾಸ್ ನುಡಿಸಿರಿ ವಿರಾಸತ್ ಹೆಸರಿನಲ್ಲಿ ಆಚರಿಸಲಾಗುವುದು.
ಆಳ್ವಾಸ್ ನುಡಿಸಿರಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಹಗಲು ಹೊತ್ತಿನಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು, ರಾತ್ರಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಯಲಿದೆ. ಆಯಾ ದಿನಗಳು ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್ನಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ಜರುಗಲಿವೆ. ವಿರಾಸತ್ನಲ್ಲಿ ದಿನವೊಂದಕ್ಕೆ ಎರಡು ಅವಧಿ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ನಡೆಯಲಿದೆ.
ನ.14ರಂದು ಆಳ್ವಾಸ್ ವಿದ್ಯಾರ್ಥಿಸಿರಿ, ಅದೇ ದಿನ ಸಾಯಂಕಾಲ ಆಳ್ವಾಸ್ ವಿರಾಸತ್ ಹಾಗೂ ಆಳ್ವಾಸ್ ಕೃಷಿಸಿರಿ’ ಉದ್ಘಾಟನೆಗಳು ನಡೆಯಲಿವೆ. ನ.15ರಂದು ಆಳ್ವಾಸ್ ನುಡಿಸಿರಿ ಉದ್ಘಾಟನೆಗೊಳ್ಳಲಿದ್ದು, ನ.17ರಂದು ಮಧ್ಯಾಹ್ನ ಸಮಾರೋಪಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಶ ನೀಡಲಾಗುವುದು. ಅರ್ಥವತ್ತಾಗುವಂತೆ ಹಾಗೂ ಆಕರ್ಷಕವಾಗುವಂತೆ ಸಮ್ಮೇಳನವನ್ನು ಆಯೋಜಿಸಲು ಪೂರ್ವತಯಾರಿಗಳು ಭರದಿಂದ ಸಾಗುತ್ತಿವೆ.
ಪ್ರತಿನಿಧಿಯಾಗ ಬಯಸುವವರು ರೂ.100 ಪ್ರತಿನಿಧಿ ಶುಲ್ಕದೊಂದಿಗೆ ಸದಸ್ಯರಾಗಬಹುದು.ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಉಚಿತ ಪ್ರವೇಶವಿದೆ. ನಾಡು-ನುಡಿ-ಸಂಸ್ಕೃತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ ವಿರಾಸತ್-2019’ನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ 08258-261229 ದೂರವಾಣಿ ಮತ್ತು nudisiri@alvas.org ಈ ಮೇಲ್ ಮುಖಾಂತರ ಸಂಪರ್ಕಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.