ವಿದ್ಯಾಗಿರಿ: ಭಾವದ ತೀವ್ರತೆ ಕಾವ್ಯದ ಒಂದು ವಸ್ತುವಾಗದೆ, ಸಂಘರ್ಷದ ಸ್ಥಿತಿಯಲ್ಲಿ ಇದ್ದಾಗ ಕಾವ್ಯ ಹುಟ್ಟುತ್ತದೆ ಎಂದು ಖ್ಯಾತ ವಿರ್ಮಶಕ ಡಾ. ಬಸವರಾಜ ಕಲ್ಗುಡಿ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಬೆಳಗಾವಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ “ಕಾವ್ಯ-ವಿಮರ್ಶಾ ಶಿಬಿರ”ದ ಕೊನೆಯ ದಿನವಾದ ಇಂದು, ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
“ಬದುಕು ಬೇರೆಯಲ್ಲ, ಕಾವ್ಯ ಬೇರೆಯಲ್ಲ ಹಾಗಾಗಿ ಕಾವ್ಯವನ್ನು ಓದುತ್ತಾ ಅದರಲ್ಲಿರುವ ಸತ್ವವನ್ನು ಗ್ರಹಿಸುತ್ತಾ, ಜೀವನದಲ್ಲಿ ಅಳವಡಿಸುತ್ತಾ ಸಾಗಬೇಕು. ಕಾವ್ಯವು ಆತಂಕ ಹಾಗೂ ಸಂತೋಷ ಹೀಗೆ ಸಂಧಿಗ್ಧತತೆಯಲ್ಲಿ ಇರುತ್ತದೆ, ಇದು ಅಷ್ಟು ಸುಲಭವಾಗಿ ದಕ್ಕುವುದಿಲ್ಲ ಕಾವ್ಯದ ಕುರಿತು ಗಾಢ ಓದು ತುಂಬಾನೇ ಮುಖ್ಯ. ಇದರಿಂದ ನಮ್ಮಲ್ಲಿರುವ ಆತಂರಿಕ ತಳಮಳ, ಸಂಕಟ ಎಲ್ಲವೂ ನಿವಾರಣೆಗೊಳ್ಳುತ್ತದೆ. ಕಾವ್ಯದಲ್ಲಿ ಪದಕ್ಕೆ ಅರ್ಥವಿಲ್ಲ ಬದಲಾಗಿ ಸನ್ನಿವೇಶ, ಕಾಲ ಮತ್ತು ಓದುಗನ ಮನಸ್ಥಿತಿಯ ಮೂಲಕ ಒಂದು ಕಾವ್ಯ ಪರಿಪೂರ್ಣವಾಗಿ ಅರ್ಥ ಪಡೆಯುತ್ತದೆ. ಕಾವ್ಯ ರಚನೆ ಸರಳ ಕ್ರೀಯೆಯಲ್ಲ” ಎಂದು ಹೇಳಿದರು.
ಮುಖ್ಯ ಅತಿಥಿ, ಪ್ರೋ. ಕೃಷ್ಣಮೂರ್ತಿ ಮಾತನಾಡಿ “ವಿದ್ಯಾರ್ಥಿಗಳು ಜನಪದ ಸಾಹಿತ್ಯದ ಕುರಿತು ತಮ್ಮ ಹೆಚ್ಚಿನ ಒಲವನ್ನು ತೋರಿಸಬೇಕು. ದೈನಂದಿನ ಬದುಕಿನಲ್ಲಿ ನಡೆಯುವ ಹಲವು ಸನ್ನಿವೇಶ, ಸಮಸ್ಯೆಗಳನ್ನು ಈ ಸಾಹಿತ್ಯದ ಮೂಲಕ ಗಮನಿಸಬಹುವುದು. ನಮ್ಮ ಸುತ್ತ ಮುತ್ತಲಿನ ಜಾನಪದ ಕಲೆ, ನಂಬಿಕೆ, ಪದ್ಧತಿ ಇವು ಜಾನಪದ ಸಾಹಿತ್ಯಕ್ಕೆ ಹೊಸ ಅರ್ಥವನ್ನು ನೀಡುತ್ತಾ ಹೋಗುತ್ತದೆ. ಜೊತೆಗೆ ಕನ್ನಡ ಸಾಹಿತ್ಯದೆಡೆಗೆ ಹೆಚ್ಚಿನ ಆಸಕ್ತಿ ನೀಡಿ ಬೆಳೆಸುವುದು ಅಗತ್ಯ” ಎಂದು ಹೇಳಿದರು.
ಶಿಬಿರಾಧ್ಯಕ್ಷ ಪ್ರೋ. ರಾಘವೇಂದ್ರ ಪಾಟೀಲ ಮಾತನಾಡಿ “ಸಾಹಿತ್ಯದ ಸ್ಪರ್ಶ ಇದ್ದರೆ ಯಾವುದೇ ವೃತ್ತಿ ಕೈಗೊಂಡರು ಅದರಲ್ಲಿ ವಿಶೇಷ ಪ್ರಭೆ ಮೂಡುತ್ತದೆ. ಮನಸ್ಸಿನ ಸೂಕ್ಷ್ಮತೆಗೆ ಸಾಹಿತ್ಯ ಜೀವಂತಿಕೆ ನೀಡುತ್ತದೆ. ಸಾಹಿತ್ಯ ವ್ಯಕ್ತಿಯ ಉನ್ನತಿಗೆ ಕಾರಣವಾಗುತ್ತದೆ. ಸಾಹಿತ್ಯದ ಬಗೆಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಶಿಕ್ಷಣ ಸಂಸ್ಥೆಯ ಮುಖ್ಯ ಗುರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಚಾಲಕ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಮುಖ್ಯಸ್ಥ, ಪ್ರೋ.ಚಂದ್ರಶೇಖರ ಗೌಡ ಸ್ವಾಗತಿಸಿದರು, ವಿದ್ಯಾರ್ಥಿ ವೈಷ್ಣವಿ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.