ಮೂಡುಬಿದಿರೆ: ಪೇಟೆಯ ಜ್ಯೋತಿನಗರ ಸಮೀಪ ಕೈಕಂಬದ ರೋಟರಿ ಮುನ್ಸಿಪಾಲ್ ಪಾರ್ಕ್‍ನಲ್ಲಿ ಮೂಡುಬಿದಿರೆ ಪುರಸಭೆ, ರೋಟರಿ ಕ್ಲಬ್ ಮೂಡುಬಿದಿರೆ, ಆಳ್ವಾಸ್ ಕಾಲೇಜಿನ ಎನ್‍ಸಿಸಿ ವಿಭಾಗದ ವತಿಯಿಂದ ಔಷಧೀ ಸಸಿಗಳನ್ನು ನೆಡುವ ಮೂಲಕ ಔಷಧಿ ಉದ್ಯಾನವನ ಶನಿವಾರ ನಿರ್ಮಾಣ ಮಾಡಲಾಯಿತು. 67 ಔಷಧಿ ತಳಿಯ 200 ಅಧಿಕ ಸಸಿಗಳನ್ನು ನೆಡಲಾಯಿತು.
ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಎಸ್. ಮಾತನಾಡಿ, ಜನರಿಗೆ ಶುದ್ಧ ಗಾಳಿ ಹಾಗೂ ಔಷಧೀಯ ತಳಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದೇವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು ಮಿಜಾರಿನ ಶೋಭಾವನದಲ್ಲಿರುವ ಔಷಧಿ ಸಸಿಗಳನ್ನು ನೀಡಿ ಸಹಕರಿಸಿದ್ದಾರೆ. ಇಂಜಿಯರ್ ಬೆನ್ನಿ ಮ್ಯಾಥ್ಯೂ ಅವರು ಯೋಜನೆ ರಚಿಸಿಕೊಟ್ಟಿದ್ದು, ಸುಂದರವಾದ ವನ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಪುರಸಭೆಯ ವತಿಯಿಂದ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಕೊರಗಪ್ಪ, ಇಕ್ಬಾಲ್ ಕರೀಂ, ಸುರೇಶ್ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಎನ್‍ಸಿಸಿ ಅಧಿಕಾರಿ ಡಾ. ರಾಜೇಶ್, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್ ಗಫೂರ್, ಪದಾಧಿಕಾರಿಗಳಾದ ಶ್ರೀಕಾಂತ್ ಕಾಮತ್, ಶರೀಫ್, ಸುದರ್ಶನ್ ಜೈನ್, ಅಕ್ರಂ ಶೇಖ್, ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಶೋಭಾವನದ ಮೇಲ್ವಿಚಾರಕ ಮುತ್ತಪ್ಪ, ಪುರಸಭೆಯ ಸಿಬ್ಬಂದಿಗಳಾದ ದಾಮೋದರ್, ಜನಾರ್ದನ ಹಾಗೂ ಆಳ್ವಾಸ್ ಎನ್‍ಸಿಸಿ ಘಟಕ ವಿದ್ಯಾರ್ಥಿಗಳು ಔಷಧಿಯ ಸಸಿಗಳನ್ನು ನೆಟ್ಟರು.