ಮೂಡಬಿದಿರೆ: ಭಾರತದ ರಾಷ್ಟ್ರೀಯ ಸೈನ್ಯ ದಳವು ಯುವಜನತೆಯನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕಮಾಂಡರ್ ಮಹೇಶ್ ಎನ್ ನಾಯಕ್ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೈನ್ಯ ದಳದ ಮೂರು ದಳಗಳ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಮ್ಮ ದೇಶದಲ್ಲಿ ನಿಜವಾದ ದೇಶಪ್ರೇಮದ ಭಾವನೆ ಕೆಲವೇ ಕೆಲವು ಜನರಲ್ಲಿ ಮಾತ್ರ ಇದ್ದು, ವಿವಿಧ ಧರ್ಮ, ಜಾತಿ, ಪಂಗಡ ಹಾಗೂ ವರ್ಗಗಳಿರುವ ಭಾರತದಂತಹ ದೇಶಕ್ಕೆ ಇದು ಅತ್ಯಂತ ಆತಂಕಕಾರಿಯಾಗಿದೆ. ಇಂದಿನ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಿದ್ದು, ತಮ್ಮ ಭವ್ಯ ಭವಿಷ್ಯವನ್ನು ಎಳವೆಯಲ್ಲಿಯೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಸೈನ್ಯ ದಳದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಶಿಸ್ತಿನ ಜೀವನ ನಡೆಸಲು ಸಾದ್ಯ ಎಂದರು. ಆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಳ್ಳೆಯ ಸಂಸ್ಕಾರ ಹಾಗೂ ಶಿಸ್ತಿಗೆ ಸದಾ ಪ್ರಾಶಸ್ತ್ಯ ನೀಡುತ್ತಾ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ವಿಂಗ್ ಕಮಾಂಡರ್ ಪಿ.ಸಿ ಪಂಥ್ ಮಾತನಾಡಿ, ರಾಷ್ಟ್ರೀಯ ಸೈನ್ಯ ದಳದ ಮುಖ್ಯ ಆದ್ಯತೆ ಸ್ವಶಿಸ್ತಾಗಿದ್ದು, ಎನ್‍ಸಿಸಿಯಲ್ಲಿ ಕಲಿಯುವ ಒಳ್ಳೆಯ ಅಂಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸದಾ ಆಳವಡಿಸಿಕೊಳ್ಳುಬೇಕು. ವಿದ್ಯಾರ್ಥಿಗಳು ತಮ್ಮ ಜೀವನದ ಪಥವನ್ನು ಎಂದೂ ಕೆಟ್ಟದಾರಿಗೆ ಒಯ್ಯದೆ, ತಮ್ಮ ಸಾಮಾಥ್ರ್ಯವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಕ್ಯಾಂಪಾಸ್‍ನಲ್ಲಿ ರಾಷ್ಟ್ರೀಯ ಸೈನ್ಯ ದಳದ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಗೌರವವನ್ನು ನೀಡುತ್ತಾ ಬಂದಿದೆ. ಪ್ರತಿಷ್ಠಾನದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಎನ್‍ಸಿಸಿ ಪ್ರಮುಖ ಪಾತ್ರ ವಹಿಸಿದ್ದು, ಅದರಲ್ಲೂ ರಾಷ್ಟ್ರೀಯ ಸೈನ್ಯ ದಳದ 300 ಕೆಡೆಟ್‍ಗಳು 24000ಕ್ಕೂ ಅಧಿಕ ವಿದ್ಯಾರ್ಥಿಗಳ ಶಿಸ್ತನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಯುವ ಸೈನಿಕರು ತಮ್ಮ ಬದ್ದತೆಯನ್ನು ಯುನಿಫಾರ್ಮನಲ್ಲಿರುವ ಸಂಧರ್ಭದಲ್ಲಿ ಮಾತ್ರ ತೋರ್ಪಡಿಸದೆ, ಎಲ್ಲಾ ಸಮಯದಲ್ಲೂ ಶಿಸ್ತು ಹಾಗೂ ಏಕತೆಯನ್ನು ತೋರ್ಪಡಿಸುತ್ತಾ, ಪ್ರತಿಯೊಬ್ಬರಿಗೂ ಮಾದರಿಯಾಗಿ ಬದುಕಬೇಕು ಎಂದರು. ಮುಂದಿನ ದಿನಗಳಲ್ಲಿ ಆಳ್ವಾಸ್‍ನಲ್ಲಿ ಏರ್ ರೈಫಲ್ ಶೂಟಿಂಗ್ ಅಕಾಡೆಮಿ ಹಾಗೂ ಏರೋ ಮಾಡೆಲಿಂಗ್ ಕ್ಲಬ್‍ನ್ನು ಸ್ಥಾಪಿಸುವ ಯೋಚನೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಆರ್ಮಿ ಹಾಗೂ ಏರ್ ವಿಂಗ್‍ನಿಂದ ಸೈಲೆಂಟ್ ಡ್ರಿಲ್ ನಡೆಯಿತು. ಕಾರ್ಯಕ್ರಮದಲ್ಲಿ ಎನ್‍ಸಿಸಿಯ ಬೆಸ್ಟ್ ಔಟ್ ಗೋಯಿಂಗ್ ಕೆಡೆಡ್‍ಗಳು ಹಾಗೂ ಇಯರ್ ವೈಸ್ ಬೆಸ್ಟ್ ಕೆಡೆಟ್‍ಗಳನ್ನು ಗುರುತಿಸಿ, ಸನ್ಮಾನಿಸಲಾಯಿತು. ಎನ್‍ಸಿಸಿಯ ವಾರ್ಷಿಕ ಚಟುವಟಿಕೆಯನ್ನು ಪ್ರಸ್ತುತ ಪಡಿಸುವ ವಿಡಿಯೋವನ್ನು ಈ ಸಂಧರ್ಭದಲ್ಲಿ ಪ್ರದರ್ಶಿಸಲಾಯಿತು. ನಂತರ ರಾಷ್ಟ್ರೀಯ ಸೈನ್ಯ ದಳದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಕಾಲೇಜಿನ ಎನ್‍ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ಡಾ ರಾಜೇಶ್, ಪ್ಲೈಯಿಂಗ್ ಆಫೀಸರ್ ಪರ್ವೆಜ್ ಶರೀಫ್ ಬಿ.ಜಿ, ಸಿಟಿಓ ನಾಗರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸೀನಿಯರ್ ಅಂಡರ್ ಆಫೀಸರ್ ಶ್ರೀಲಕ್ಷ್ಮಿ ಘಾಟೆ ಕಾರ್ಯಕ್ರಮ ನಿರೂಪಿಸಿದರು.