ಮೂಡಬಿದಿರೆ: “ನಮಗೆ ಬದುಕುವ ಸಾಮಥ್ರ್ಯ ಹಾಗೂ ಅವಕಾಶ ದೊರಕಿದ್ದು ಪ್ರಕೃತಿಯಿಂದ. ಆದರೆ ಕಾಲ ಬದಲಾದಂತೆ, ಮಾನವ ಪ್ರಕೃತಿಯನ್ನೇ ತುಳಿದು ಮುಂದೆ ಸಾಗುವ ಪ್ರಯತ್ನದಲ್ಲಿದ್ದಾನೆ. ಸಮಾಜದ ಹೊರತು ಮಾನವನ ಜೀವನ ಕಷ್ಟಸಾಧ್ಯ ಎಂಬುದರ ಅರಿವು ನಮಗಿರಬೇಕು. ಸಮಾಜದಿಂದ ಪಡೆದದ್ದನ್ನು, ಸಮಾಜಕ್ಕೆ ಹಿಂತಿರುಗಿಸುವ ಪ್ರಯತ್ನ ಅಗತ್ಯ” ಎಂದು ಭಾರತದ `ಹಸಿರು ಮಾನವ’ ಅಬ್ದುಲ್ ಘಾನಿ ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ಆರ್ಟ್ ಎಕ್ಸೂಬರೆನ್ಸ್: ಕಾಸ್ಮೋಸ್ 2019” ಅಂತರ್ ಕಾಲೇಜು ಫೆಸ್ಟ್‍ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಹಾಗೂ ಪ್ರಕೃತಿಯಿಂದ ವಿಮುಖನಾಗಿ ಬದುಕಬಹುದೆಂಬುವ ಮಾನವನ ಕಲ್ಪನೆ ತಪ್ಪು. ಮಾನವ ಸಮಾಜ ಜೀವಿ, ಆತ ಸಮಾಜಮುಖಿಯಾಗಿಯೇ ಬಾಳಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಮಾನವಿಕ ವಿಭಾಗದ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಗಳನ್ನು ಪ್ರತಿಬಿಂಬಿಸಲು ಯತ್ನಿಸಿರುವುದು ವಿಶೇಷ ಹಾಗೂ ಪ್ರಶಂಸನೀಯ. ಇಂತಹ ಅನೇಕ ಪ್ರಯತ್ನಗಳು ಮುಂದೆ ಕೂಡ ಮೂಡಿಬರಲಿ ಎಂದು ಹಾರೈಸಿದರು. ನಂತರ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಮಗ್ರ ಪ್ರಶಸ್ತಿ ಪಡೆದರು. ಕಾರ್ಕಳದ ಎಂ.ಪಿ.ಎಂ. ಕಾಲೇಜು ರನ್ನರ್ ಅಪ್ ಸ್ಥಾನ ಗಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್., ಕಾರ್ಯಕ್ರಮದ ಸಂಘಟಕರಾದ ಜೋಸ್ವಿಟಾ, ಮಂಜುನಾಥ್, ಸ್ವಾತಿ ಶೆಟ್ಟಿ, ವಿದ್ಯಾರ್ಥಿ ಸಂಘಟಕರಾದ ರಾಹುಲ್ ಹಾಗೂ ಅಭಿನಂದನ್, ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಕ್ಷಿತಾ ಸ್ವಾಗತಿಸಿ, ರಾಹುಲ್ ವಂದಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಚೈತಾಲಿ ರೈ ಕಾರ್ಯಕ್ರಮ ನಿರೂಪಿಸಿದರು.