ಮೂಡುಬಿದಿರೆ: ಐಐಟಿ ಬಾಂಬೆ ಸಹಯೋಗದಲ್ಲಿ 150ನೇ ಗಾಂಧಿ ಜಯಂತಿ ಮತ್ತು ಸ್ಟೂಡೆಂಟ್ ಸೋಲಾರ್ ಅಂಬಾಸಿಡರ್ ಕಾರ್ಯಗಾರವನ್ನು ಆಳ್ವಾಸ್ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಇತಿಹಾಸತಜ್ಞ ಡಾ.ಪುಂಡಿಕಾಯಿ ಗಣಪಯ್ಯ ಭಟ್, ನುಡಿದಂತೆ ನಡೆದ ಮಹಾತ್ಮ ಗಾಂಧೀಜಿ ತನ್ನ ಜೀವನವೇ ಒಂದು ಸಂದೇಶ ಎಂಬುದಾಗಿ ತಿಳಿಸಿ ತೆರಳಿದ್ದಾರೆ ಎಂದು ಹೇಳಿದರು.
ಒಮ್ಮೆ ರೈಲು ಪ್ರಯಾಣದಲ್ಲಿ ಗಾಂಧೀಜಿಯವರ ಜತೆಯಾದ ಇಂಗ್ಲೆಂಡ್ನ ಪತ್ರಕರ್ತ ಅವರ ಸಂದರ್ಶನ ಬಯಸಿದಾಗ ಸೋಮವಾರದ ಮೌನಾಚರಣೆಯಲ್ಲಿದ್ದ ಕಾರಣ ಗಾಂಧೀಜಿ ಸಂದರ್ಶನ ನೀಡಲು ನಿರಾಕರಿಸಿದರು. ತಮ್ಮ ಸಂದೇಶವನ್ನು ತಿಳಿಸಬೇಕೆಂದು ಪತ್ರಕರ್ತ ಒತ್ತಾಯಿಸಿದಾಗ ಗಾಂಧೀಜಿ ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಚೀಟಿಯಲ್ಲಿ ಬರೆದುಕೊಟ್ಟರು ಎಂಬ ಘಟನೆಯನ್ನು ಮೆಲುಕು ಹಾಕಿದರು.
ಗಾಂಧೀಜಿ ಮತ್ತು ಸುಭಾಶ್ಚಂದ್ರ ಬೋಸರ ಮಧ್ಯ ದ್ವೇಷವಿತ್ತು ಎಂಬುದಾಗಿ ಇಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಅವರ ಮಧ್ಯವಿದ್ದದ್ದು ರಾಜಕೀಯ ಭಿನ್ನಾಭಿಪ್ರಾಯ ಮಾತ್ರ. ಅಲ್ಲದೇ ಗಾಂಧೀಜಿ ಅವರನ್ನು ‘ರಾಷ್ಟ್ರಪಿತ’ ಎಂದು ಮೊದಲ ಬಾರಿಗೆ ಸಂಬೋಧಿಸಿದ್ದು ಸುಭಾಷ್ಚಂದ್ರ ಬೋಸ್ ಅವರೇ. ಹೀಗೆ ರಾಜಕೀಯ ಭಿನ್ನತೆಗಳ ನಡುವೆಯೂ ಎಲ್ಲರಿಂದ ಗೌರವಕ್ಕೆ ಪಾತ್ರವಾಗುತ್ತಿದ್ದ ವ್ಯಕ್ತಿತ್ವ ಗಾಂಧೀಜಿಯವರದ್ದಾಗಿತ್ತು ಎಂದರು.
ಮುಖ್ಯ ಅತಿಥಿಯಾಗಿದ್ದ ಮಣಿಪಾಲ್ನ ಎಂಐಟಿಯ ಸಹಾಯಕ ಪ್ರಾಧ್ಯಾಪಕ ಡಾ ರವಿಪ್ರಕಾಶ್ ವೈ ‘ಬದುಕಿ, ಬದುಕಲು ಬಿಡಿ’ ಎಂಬ ತತ್ವದಂತೆ ಪ್ರಕೃತಿಗೆ ಪೂರಕವಾಗಿ ಜೀವಿಸದಿದ್ದರೆ ಡೈನೋಸರ್ನಂತೆಯೇ ಮಾನವನೂ ಅಳಿವು ಕಾಣುವಂತಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಮತ್ತು ಸ್ನಾತಕೋತ್ತರಪದವಿಯ ಒಟ್ಟು 100 ವಿದ್ಯಾರ್ಥಿಗಳುಕಾರ್ಯಗಾರದಲ್ಲಿ ಪಾಲ್ಗೊಂಡು ಸೌರ ವಿದ್ಯುದ್ವೀಪ ಜೋಡಣೆ ಹಾಗೂ ಉಪಯೋಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮವನ್ನು ಶರಣ್ಯ ನಿರೂಪಿಸಿದರು.
ವೇದಿಕೆಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಭೌತಶಾಸ್ತ್ರ ವಿಭಾಗ ಸಂಯೋಜಕ ಡಾ.ಶಶಿಧರ್ ಭಟ್ ಉಪಸ್ಥಿತರಿದ್ದರು.
–ಬಾಕ್ಸ್—
ಗಾಂಧೀಜಿಯ ಊರುಗೋಲು ಮತ್ತು ಅವಿಭಜಿತ ದ.ಕ
1936ರಲ್ಲಿ ನಡೆದ ಐತಿಹಾಸಿಕ ದಾಂಡಿಯಾತ್ರಿಯಲ್ಲಿ(ಉಪ್ಪಿನ ಸತ್ಯಗ್ರಾಹ) ಗಾಂಧೀಜಿ ಬಳಸಿದ್ದ ಊರುಗೋಲು ಅವಿಭಜಿತ ದ.ಕ. ಪ್ರದೇಶದ್ದು ಎಂಬ ಕುತೂಹಲಕಾರಿ ಸಂಗತಿಯನ್ನು ಡಾ.ಪಿ.ಗಣಪಯ್ಯ ಭಟ್ ವಿವರಿಸಿದರು. ರಾಷ್ಟ್ರಕವಿ ಪಂಜೆ ಮಂಗೇಶರಾಯರು ತಮ್ಮ ಆತ್ಮೀಯ ಗೆಳೆಯ ಮುಂಬೈನ ಕಾಕಾ ಕಾಲೇಲ್ಕರ್ ಒಮ್ಮೆ ಮಂಜೇಶ್ವರಕ್ಕೆ ಬಂದಾಗ ಅವರಿಗೆ ನೆನಪಿನ ಕಾಣಿಕೆಯಾಗಿ ಊರುಗೋಲನ್ನು ನೀಡಿದರು. ಕಾಕ ಕಾಲೇಲ್ಕರ್ ಅವರು ಆ ಊರುಗೋಲನ್ನು ತಮ್ಮ ಆತ್ಮೀಯರಾದ ಮಹಾತ್ಮ ಗಾಂಧಿ ಅವರಿಗೆ ನೀಡಿದರಂತೆ. ಅದೇ ಊರುಗೋಲನ್ನು ಗಾಂಧೀಜಿ ದಾಂಡಿಯಾತ್ರಿಯಲ್ಲಿ ಬಳಸಿದರು ಎಂಬ ಕೌತುಕ ವಿಚಾರವನ್ನು ತಿಳಿಸಿದರು.