80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಚಾಲನೆ

ಮೂಡುಬಿದಿರೆ: ಜನವರಿ 2 ರಿಂದ 6ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‍ಶಿಫ್‍ಗೆ ಚಾಲನೆ ನೀಡಲಾಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ಕ್ರೀಡೆಯು ಕೇವಲ ಪಠ್ಯೇತರ ಚಟುವಟಿಕೆಯಲ್ಲ ಬದಲಾಗಿ ಶಿಕ್ಷಣದ ಒಂದು ಭಾಗ. ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿಯಾಗಿ ಬೆಳೆಸಬೇಕು. ಮುಂಬರುವ ದಿನಗಳಲ್ಲಿ ಸೀಮಿತ ಅವಧಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು, ಭಾರತೀಯ ಕ್ರೀಡಾಪಟುಗಳನ್ನು ಸಧೃಢವಾಗಿ ಬೆಳೆಸಬೇಕು. 2028ರ ಒಲಿಪಿಂಕ್ಸ್ನಲ್ಲಿ ಇತರ ದೇಶಗಳಿಗೆ ಸಮವಾದ ಕಠಿಣ ಸ್ಪರ್ಧೆ ನೀಡುವಂತೆ ಭಾರತೀಯ ಕ್ರೀಡಾಪಟುಗಳನ್ನು ತಯಾರು ಮಾಡುವುದು ಭಾರತಕ್ಕಿರುವ ಸವಾಲು ಎಂದರು.

ನ್ಯೂ ಇಂಡಿಯಾ ನಿರ್ಮಾಣದೊಂದಿಗೆ ಫಿಟ್ ಇಂಡಿಯಾ ಎಂಬ ಹೊಸ ಆಂದೋಲನವು ಭಾರತೀಯರಲ್ಲಿ ಆರೋಗ್ಯದ ಅರಿವನ್ನು ಇನ್ನಷ್ಟು ಹೆಚ್ಚಿಸಲಿದೆ. ಕೇವಲ ಕ್ರೀಡೆಗಾಗಿ ಮಾತ್ರವಲ್ಲದೇ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬ ಕ್ರೀಡಾಳುವನ್ನು ಗೌರವದಿಂದ ಕಾಣಬೇಕೆಂದು ಹೇಳಿದರು. ಕೇಂದ್ರ ಸರ್ಕಾರವು ಪ್ರತಿ ರಾಜ್ಯದಲ್ಲಿ ನೂತನ ಕ್ರೀಡಾ ನೀತಿಗಳನ್ನು ಆರಂಭಿಸಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಬೆಂಬಲವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 4ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾ ಕೂಟದ ಆತಿಥ್ಯ ವಹಿಸಿದ ಆಳ್ವಾಸ್ ಕಾಲೇಜಿನ ಸಾಧನೆಯನ್ನು ಶ್ಲಾಘಿಸಿದರು.

ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಪ್ರಾರಂಭವಾದ ಸಾಂಸ್ಕøತಿಕ ಮೆರವಣಿಗೆಯು ಅತ್ಯಂತ ಆಕರ್ಷಕವಾಗಿ ಸಾಗಿತು. ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಸಾಂಸ್ಕøತಿಕ ಮೆರವಣಿಗೆಗೆ ಚಾಲನೆ ನೀಡಿದರು. ಆಳ್ವಾಸ್ ಸಂಸ್ಥೆಯು ಕ್ರೀಡೆಯನ್ನು ಮಾತ್ರ ಉತ್ತೇಜಿಸದೇ ಸಾಂಸ್ಕೃತಿಕ ಬೆಳವಣಿಗೆಗೂ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಎಂಬುದಕ್ಕೆ ಈ ಮೆರವಣಿಗೆ ಸಾಕ್ಷಿಯಾಯಿತು. ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಸಾಂಸ್ಕೃತಿಕ ತಂಡ ದೇಶದ ವೈವಿಧ್ಯತೆಯನ್ನು ಪ್ರತಿನಿಧಿಸಿದವು.

ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಒಲಿಂಪಿಕ್ಸ್ ಕ್ರೀಡಾಪಟುಗಳಾದ ಆಸ್ವಿನಿ ಅಕ್ಕುಂಜೆ, ಸತೀಶ್ ರೈ, ಎ. ಆರ್ ಪೂವಮ್ಮ, ಧಾರುಣ್ ಅಯ್ಯಸ್ವಾಮಿ, ಮೋಹನ್ ಕುಮಾರ್ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಆಳ್ವಾಸ್ ನ ವಿಧ್ಯಾರ್ಥಿಗಳು ಭಾಗವಹಿಸಿದರು. ದೇಶದ ಸುಮಾರು 400ಕ್ಕೂ ಅಧಿಕ ವಿಶ್ವವಿದ್ಯಾಲಯಗಳ 4000ಕ್ಕೂ ಅಧಿಕ ಅಥ್ಲೀಟ್‍ಗಳು ಹಾಗೂ 2000 ಕ್ರೀಡಾಧಿಕಾರಿಗಳು ಈ ಭಾಗವಹಿಸಿದ್ದರು. ಪಥಸಂಚಲನದ ಬಳಿಕ ಹೀಲಿಯಮ್ ಬಲೂನುಗಳ ಹಾರಾಟ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ಎಲ್ಲರ ಮನಸೆಳೆಯಿತು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ಸಚ್ಚಿದಾನಂದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸಿ ಟಿ ರವಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಉಡುಪಿ ಶಾಸಕ ರಘುಪತಿ ಭಟ್, ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಮೆರವಣಿಗೆಯ ಪ್ರಮುಖ ಆಕರ್ಷಣೆ:-
• ಎಂಭತ್ತನೇ ದೇಶಿಯಮಟ್ಟದ ಕ್ರೀಡಾಕೂಟದ ಅಂಗವಾಗಿ ಪ್ರತಿಯೊಂದು ತಂಡದಲ್ಲಿ ಎಂಭತ್ತು ವಿಧ್ಯಾರ್ಥಿಗಳು ಭಾಗವಹಿಸುವಿಕೆ.
• ಕರ್ನಾಟಕ, ಉತ್ತರಭಾರತ, ದಕ್ಷಿಣಭಾರತ ಹಾಗೂ ಚೀನಾ, ಈಜಿಪ್ಟ್, ಶ್ರೀಲಂಕಾ ಶೈಲಿಯ ಉಡುಗೆ ತೊಡುಗೆಗಳ ಅನಾವರಣ.
• ಧೈತ್ಯಗಾತ್ರದ ಮನುಷ್ಯ, ಕೋಳಿ, ಮೊಸಳೆ, ಕೀಲುಕುದುರೆ, ತಟ್ಟಿರಾಯ, ಶಂಖನಾದ, ದಾಸಯ್ಯ, ವೀರಗಾಸೆ, ಸುಲ್ತಾನ್ ಹೋರಿ ಹಾಗೂ ಡುಳ್ಳುಕುಣಿತಗಳ ಪ್ರದರ್ಶನ.
• ಮೆರವಣಿಗೆಯಲ್ಲಿ ಮೇಳೈಸಿದ ಉತ್ತರಭಾರತದ ಪೇಟ ವಿನ್ಯಾಸ
• ಮೆರವಣಿಗೆಯುದ್ದಕ್ಕೂ ಚೆಂಡೆ, ತಾಸೆ, ಕೊಂಬು, ಕಹಳೆ, ನಾಸಿಕ್ ಬ್ಯಾಂಡ್ ಗಳ ವಾಧ್ಯಘೋಷ

 

Highslide for Wordpress Plugin