ಮೂಡಬಿದ್ರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಿಜಾರು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಣಿಪುರಿ ಹೊಸವರ್ಷ ಆಚರಣೆಯ ಹಬ್ಬವಾದ ಶಜಿಬೂ ಚೆರೋಬಾವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಎಂಎಲ್‍ಸಿ ಗಣೇಶ್ ಕಾರ್ಣಿಕ್ ‘ಒಂದು ಧೃಡವಾದ ಗುರಿಯೆಡೆಗೆ ಸರಿಯಾದ ಹೆಜ್ಜೆಯನ್ನಿಡುತ್ತ ನಡೆಯಿರಿ, ನಿಮ್ಮ ವಿಕಸನಕ್ಕೆ ಸಲ್ಲದ ವಿಷಯಗಳ ಬಗ್ಗೆ ಯೋಚಿಸಬೇಡಿ. ಪ್ರತಿಯೊಬ್ಬರಲ್ಲೂ ಸಾಧಿಸುವ ಸಾಮಥ್ರ್ಯವಿರುತ್ತದೆ, ಇಲ್ಲಿ ನಮ್ಮ ಆಯ್ಕೆಗಳು ಅತಿಮುಖ್ಯವಾಗುತ್ತವೆ’ ಎಂದರು.
ಹಬ್ಬಗಳು ಸಂಸ್ಕೃತಿಯ ಮುಖವಾಣಿ, ನಾವು ಎಷ್ಟೇ ಸಾಂಸ್ಕೃತಿಕ-ಸಾಮಾಜಿಕವಾಗಿ ಎಷ್ಟೇ ಮುಂದುವರಿದಿದ್ದರೂ ಹಬ್ಬಗಳ ಆಚರಣೆಯನ್ನು ಮರೆಯಬಾರದು ಎಂದು ಅವರು ಅಭಿಪ್ರಯಪಟ್ಟರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹಬ್ಬಗಳು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಿದ್ಯಾರ್ಥಿಗಳು ಈ ಆಚರಣೆಯನ್ನು ಕೇವಲ ಸಂಭ್ರಮವೆಂದು ಭಾವಿಸದೆ ಒಂದು ಕಲಿಕೆಯ ಪ್ರಕ್ರಿಯೆ ಎಂದು ಭಾವಿಸಬೇಕು’ ಎಂದರು
ಶೈಜೂ ಚೆರೋಬಾ ಮಣಿಪುರದ ಸಂಸ್ಕೃತಿಯಲ್ಲಿ ಹೊಸವರ್ಷದ ಆಚರಣೆ. ಇಲ್ಲಿ ಸಭಾ ಕಾರ್ಯಕ್ರಮದ ನಂತರ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಣಿಪುರದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಮಣಿಪುರಿ ವಿದ್ಯಾರ್ಥಿಗಳು ತಯಾರಿಸಿದ ಊಥಿ, ಚಂಪೂತ್, ಎರೊಂಬ, ಶಿಂಗ್ಜು ಮುಂತಾದ ಖಾದ್ಯಗಳನ್ನು ಉಣಬಡಿಸಲಾಯ್ತು.
ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ. ವಿನೀತಾ ಶೆಟ್ಟಿ, ಎನ್‍ಇಪಿಎಎಂ ಸಂಚಾಲಕಿ ಕ್ರಿಸ್ಟಿ, ಕಾರ್ಯಕ್ರಮ ಸಂಚಾಲಕ ರಾಜ್‍ಕುಮಾರ್ ಉಪಸ್ಥಿತರಿದ್ದರು.